ಬೆಂಗಳೂರು: ಎಪಿಎಂಸಿ ತಿದ್ದುಪಡಿ ಮಸೂದೆ ವಿರೋಧಿಸಿ ಬೆಂಗಳೂರಿನಲ್ಲಿ ರೈತ ಸಂಘಟನೆಗಳು ದಂಗೆ ಎದ್ದಿದ್ದು, ರಸ್ತೆ ತಡೆಗೆ ಮುಂದಾದ ರೈತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರಿನ ಮೌರ್ಯ ವೃತ್ತದಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಸೋಮವಾರದಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದರು. ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ವಿಧಾನಸಭೆಯಲ್ಲಿ ವಿವಾಧಿತ ಎಪಿಎಂಸಿ ಕಾಯ್ದೆಯನ್ನು ಮಂಡಿಸುತ್ತಿದ್ದಂತೆ ಪ್ರತಿಭಟನಾನಿರತ ರೈತರ ಆಕ್ರೋಶದ ಕಟ್ಟೆಯೊಡೆಯಿತು.
ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸುತ್ತಿದ್ದ ರೈತರು ಸರ್ಕಾರದ ನಡೆ ಖಂಡಿಸಿ ಶೇಷಾದ್ರಿ ರಸ್ತೆ ಮೂಲಕ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಮುಂದಾದರು. ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಮುಂದಾದ ರೈತರನ್ನು ಪೊಲೀಸರು ಬ್ಯಾರಿಕೇಡ್ ಹಾಕಿ ತಡೆದರು.
ಪೊಲೀಸರು ರೈತರನ್ನು ತಡೆಯುತ್ತಿದ್ದಂತೆ ಕೋಡಿಹಳ್ಳಿ ಚಂದ್ರಶೇಖರ್ ಸೇರಿದಂತೆ ಪ್ರತಿಭಟನಾನಿರತ ರೈತರು
ಮೌರ್ಯವೃತ್ತದ ರಸ್ತೆಯಲ್ಲಿ ಕುಳಿತು ಧರಣಿ ಆರಂಭಿಸಿದರು. ಸಿಎಂ ಯಡಿಯೂರಪ್ಪ ಸರ್ಕಾರದ ವಿರುದ್ಧ ಆಕ್ರೊಶದ ಘೋಷಣೆ ಕೂಗಿದ ರೈತರು, ಸರ್ಕಾರ ರೈತರ ವಿರೋಧಿಯಾಗಿದೆ. ಕೂಡಲೇ ವಿಧೇಯಕ ವಾಪಸ್ ಪಡೆಯುವಂತೆ ಆಗ್ರಹಿಸಿದರು.
ರೈತರ ತಳ್ಳಾಟ-ನೂಕಾಟ ಹೆಚ್ಚಾಗುತ್ತಿದ್ದಂತೆ ಡಿಸಿಪಿ ಅನುಚೇತ್ ನೇತೃತ್ವದ ಪೊಲೀಸರು ಪ್ರತಿಭಟನಾನಿರತ ರೈತರನ್ನು ವಶಕ್ಕೆ ಪಡೆದು ಬಿಎಂಟಿಸಿ ಬಸ್ ಮೂಲಕ ಬೇರೆಡೆಗೆ ಕರೆದೊಯ್ದರು.
ಮತ್ತೊಂದೆಡೆ, ಇತ್ತ ಫ್ರೀಡಂಪಾರ್ಕ್‍ನಲ್ಲೂ ಸೋಮವಾರದಿಂದ ಪ್ರತಿಭಟನೆ ನಡೆಸುತ್ತಿದ್ದ ರೈತರು ರಸ್ತೆತಡೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಡಿಸಿದ್ದಾರೆ. ಎಪಿಎಂಸಿ ಕಾಯ್ದೆ ಮಂಡನೆ ಖಂಡಿಸಿ ಫ್ರೀಡಂಪಾರ್ಕ್‍ನಲ್ಲಿ ಸಭೆ ನಡೆಸಿದ 32 ರೈತ ಸಂಘಟನೆಗಳ ಐಕ್ಯತಾ ಸಮಿತಿ ಸರ್ಕಾರದ ವಿರುದ್ಧ ಹೋರಾಟಕ್ಕೆ ಕರೆ ನೀಡಿದೆ.
ಸೋಮವಾರ ಕರ್ನಾಟಕ ಬಂದ್‍ಗೆ ಐಕ್ಯ ಹೋರಾಟ ಸಮಿತಿ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದ್ದು, ಶುಕ್ರವಾರ ರಾಜ್ಯಾದ್ಯಂತ ಹೆದ್ದಾರಿ ಬಂದ್ ಮಾಡಿದರೆ, ಸೋಮವಾರ ಕರ್ನಾಟಕ ಬಂದ್ ಮಾಡಲಾಗುವುದು.
ಕೊರೊನಾ ಸಂಕಷ್ಟದಲ್ಲೂ ತೊಂದರೆ ಅನುಭವಿಸಿರುವ ಕನ್ನಡಗಿರು ಸೋಮವಾರದ ಬಂದ್‍ಗೆ ಬೆಂಬಲ ನೀಡಬೇಕು ಎಂದು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರಬೂರು ಶಾಂತಕುಮಾರ್ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಭೀಕರ ರಸ್ತೆ ಅಪಘಾತ:ಎರಡು ಸಾವು
ಶಿವಮೊಗ್ಗ: ಬಸ್ಸು ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃತಪಟ್ಟಿರುವ ಘಟನೆ ನಗರದ ಸರ್ಕ್ಯೂಟ್ ಹೌಸ್ ಸರ್ಕಲ್ ನಲ್ಲಿ...