ನವದೆಹಲಿ : ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಇಂದು ಬೆಳಗ್ಗೆ ಮೃತಪಟ್ಟಿರುವ ತನ್ನ ತಂದೆಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸುವುದಿಲ್ಲ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಹೇಳಿದ್ದಾರೆ.
ಕೊರೊನಾ ವೈರಸ್ ಹರಡುವುದನ್ನು ಹತೋಟಿಗೆ ತರಲು ಹೇರಲಾಗಿರುವ ಲಾಕ್ಡೌನ್ ಹಿನ್ನೆಲೆಯಲ್ಲಿ ನಾಳೆ ನನಗೆ ತಂದೆಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಆಗುತ್ತಿಲ್ಲ. ಅಂತಿಮ ಕ್ಷಣದಲ್ಲಿ ಅವರ ಜೊತೆಗಿರಲು ಬಯಸಿದ್ದೆ. ಉತ್ತರಪ್ರದೇಶದ 23 ಕೋಟಿ ಜನರ ರಕ್ಷಣೆಯ ಹೊಣೆ ಇರುವ ಕಾರಣ ಇದು ಸಾಧ್ಯವಾಗಿಲ್ಲ. ನನ್ನ ಕುಟುಂಬ ಸದಸ್ಯರಿಗೆ ಲಾಕ್ಡೌನ್ ನಿಯಮ ಪಾಲಿಸುವಂತೆ ಕೋರುತ್ತೇನೆ . ಲಾಕ್ಡೌನ್ ಬಳಿಕ ಅಲ್ಲಿಗೆ ಭೇಟಿ ನೀಡುವೆ ಎಂದು ಆದಿತ್ಯನಾಥ್ ಮಾಹಿತಿ ನೀಡಿದ್ದಾರೆ.
ಇಂದು ಬೆಳಗ್ಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋದಿ ಆದಿತ್ಯನಾಥ್ ತಂದೆ ಆನಂದ ಸಿಂಗ್ ಬಿಶ್ತ್ ಮೃತಪಟ್ಟಿದ್ದಾರೆ. ಆದಿತ್ಯನಾಥ್ ಅವರ ತಂದೆಯ ಪಾರ್ಥಿವ ಶರೀರವನ್ನು ಉತ್ತರಾಖಂಡದ ಪೌರಿ ಜಿಲ್ಲೆಯ ಹಳ್ಳಿಗೆ ಕೊಂಡೊಯ್ಯಲಾಗುತ್ತದೆ. ಕೋವಿಡ್-19 ಬಿಕ್ಕಟ್ಟಿನ ಬಗ್ಗೆ ಸಭೆ ನಡೆಸುತ್ತಿದ್ದಾಗ ಆದಿತ್ಯನಾಥ್ಗೆ ಅವರ ತಂದೆಯ ಸಾವಿನ ಸುದ್ದಿ ಲಭಿಸಿತ್ತು.
ಇನ್ನು ಆನಂದ ಸಿಂಗ್ ಬಿಶ್ತ್ ಅವರ ನಿಧನಕ್ಕೆ ರಾಜ್ಯದ ಬಿಜೆಪಿ ನಾಯಕರು ಸಂತಾಪ ಸೂಚಿಸಿದ್ದಾರೆ.








