ಮಕ್ಕಳ ಆನ್ ಲೈನ್ ಶಿಕ್ಷಣಕ್ಕಾಗಿ ಹಸು ಮಾರಿದ ತಂದೆ
ಹಿಮಾಚಲ ಪ್ರದೇಶ, ಜುಲೈ 24: ಭಾರತದಂತಹ ದೇಶಗಳಲ್ಲಿ ಕೊರೋನಾ ಸೋಂಕಿನ ದಾಳಿಯ ನಂತರ ಶಿಕ್ಷಣ ಹೆಚ್ಚು ದುಬಾರಿಯಾಗಿದೆ. ಇತ್ತೀಚೆಗೆ, ಹಿಮಾಚಲ ಪ್ರದೇಶದ ವ್ಯಕ್ತಿಯೊಬ್ಬರು ತನ್ನ ಇಬ್ಬರು ಮಕ್ಕಳು ಆನ್ ಲೈನ್ ತರಗತಿಗಳಿಗೆ ಮೊಬೈಲ್ ಫೋನ್ ಖರೀದಿಸಲು ತನ್ನ ಏಕೈಕ ಆದಾಯದ ಮೂಲವಾದ ಹಸುವನ್ನು ಮಾರಿದ್ದಾರೆ.

ಮಾರ್ಚ್ನಲ್ಲಿ ಶಾಲೆಗಳು ಮುಚ್ಚಿದ ನಂತರ, 4 ಮತ್ತು 2 ನೇ ತರಗತಿಯಲ್ಲಿ ಕಲಿಯುತ್ತಿರುವ ತನ್ನ ಮಕ್ಕಳು ಸ್ಮಾರ್ಟ್ ಫೋನ್ ಅನುಪಸ್ಥಿತಿಯಲ್ಲಿ ತಮ್ಮ ಅಧ್ಯಯನವನ್ನು ಮುಂದುವರಿಸಲು ಕಷ್ಟಪಡುತ್ತಿದ್ದರು ಎಂದು ಕಾಂಗ್ರಾ ಜಿಲ್ಲೆಯ ಜ್ವಾಲಮುಖಿಯ ಕುಲದೀಪ್ ಕುಮಾರ್ ಹೇಳಿದ್ದಾರೆ. ಕೊರೋನಾ ವೈರಸ್ ನಿಂದಾಗಿ ಲಾಕ್ಡೌನ್ ಹೇರಿದ ನಂತರ ಶಾಲೆಗಳು ಆನ್ಲೈನ್ ತರಗತಿಗಳನ್ನು ನಡೆಸುತ್ತಿವೆ. ಆದರೆ ಅವರ ಮಕ್ಕಳು ಸ್ಮಾರ್ಟ್ ಫೋನ್ ಇಲ್ಲದೇ ಆನ್ಲೈನ್ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗದ ಹಿನ್ನಲೆಯಲ್ಲಿ ಅವರು ತೀವ್ರ ಒತ್ತಡಕ್ಕೆ ಸಿಲುಕಿದ್ದರು. ನಿಮ್ಮ ಮಕ್ಕಳು ತಮ್ಮ ಅಧ್ಯಯನವನ್ನು ಮುಂದುವರೆಸಬೇಕೆಂದು ಬಯಸಿದರೆ, ಅವರಿಗೆ ಸ್ಮಾರ್ಟ್ಫೋನ್ ಅಗತ್ಯವಿದೆ ಎಂದು ಶಿಕ್ಷಕರು ಹೇಳಿದ್ದರು ಎಂದು ಕುಲದೀಪ್ ಹೇಳಿದ್ದಾರೆ.
ಅವರ ಬಡತನದ ಕಾರಣದಿಂದ ಬ್ಯಾಂಕುಗಳು ಮತ್ತು ಹಣ ಸಾಲ ನೀಡುವವರು 6,000 ರೂ.ಗಳ ಸಾಲ ನೀಡಲು ನಿರಾಕರಿಸಿದ ಬಳಿಕ, ಅವರು ಹಸುವನ್ನು ಮಾರಾಟ ಮಾಡಲು ನಿರ್ಧರಿಸಿದರು. ಅವರು ತಮ್ಮ ಹಸುವನ್ನು 6,000 ರೂಗಳಿಗೆ ಮಾರಾಟ ಮಾಡಿದರು. ಹಸುಗಳು ಅವರ ಏಕೈಕ ಆದಾಯದ ಮೂಲವಾಗಿತ್ತು ಮತ್ತು ಇದೀಗ ಆ ಹಣದಲ್ಲಿ ಸ್ಮಾರ್ಟ್ ಫೋನ್ ಖರೀದಿಸಿರುವುದಾಗಿ ಕುಲದೀಪ್ ಹೇಳಿದರು.

ಕುಲದೀಪ್, ಅವರ ಪತ್ನಿ ಮತ್ತು ಅವರ ಇಬ್ಬರು ಮಕ್ಕಳು ಜ್ವಾಲಾಮುಖಿಯ ಮಣ್ಣಿನ ಗುಡಿಸಲಿನಲ್ಲಿ ವಾಸಿಸುತ್ತಿದ್ದಾರೆ. ತನ್ನ ಬಳಿ ಬಿಪಿಎಲ್ ಕಾರ್ಡ್ ಕೂಡ ಇಲ್ಲ ಎಂದು ಹೇಳುವ ಅವರು ಆರ್ಥಿಕ ಸಹಾಯ ಪಡೆಯಲು ತಾನು ಅನೇಕ ಬಾರಿ ಪಂಚಾಯತ್ ಅನ್ನು ಸಂಪರ್ಕಿಸಿದ್ದೇನೆ. ಆದರೆ ಇದುವರೆಗೆ ಏನೂ ಮಾಡಲಾಗಿಲ್ಲ ಎಂದು ಹೇಳಿದ್ದಾರೆ.
ಏತನ್ಮಧ್ಯೆ, ಕುಲದೀಪ್ ಕುಮಾರ್ ಅವರ ಕುಟುಂಬಕ್ಕೆ ಶೀಘ್ರವಾಗಿ ಹಣಕಾಸಿನ ನೆರವು ನೀಡುವಂತೆ ಬಿಡಿಒ ಮತ್ತು ಎಸ್ಡಿಎಂಗೆ ನಿರ್ದೇಶನ ನೀಡಿದ್ದೇನೆ ಎಂದು ಜ್ವಾಲಮುಖಿ ಶಾಸಕ ರಮೇಶ್ ಧವಾಲಾ ಹೇಳಿದ್ದಾರೆ.








