ಪಾಕಿಸ್ತಾನದಲ್ಲಿ ಶ್ರೀಕೃಷ್ಣ ಹಿಂದೂ ದೇವಾಲಯದ ನಿರ್ಮಾಣಕ್ಕೆ ಫತ್ವಾ
ಇಸ್ಲಾಮಾಬಾದ್, ಜುಲೈ 4: ಸಾರ್ವತ್ರಿಕ ಚುನಾವಣೆಯಲ್ಲಿ ತಮ್ಮ ವಿಜಯವನ್ನು ಸಾಧಿಸಿ ಮತ್ತು ಪಾಕಿಸ್ತಾನದ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಇಮ್ರಾನ್ ಖಾನ್ 2018 ರಲ್ಲಿ ದೇಶದ ಅಲ್ಪಸಂಖ್ಯಾತರಿಗೆ ಧಾರ್ಮಿಕ ಸ್ವಾತಂತ್ರ್ಯದ ಭರವಸೆ ನೀಡಿದ್ದರು. ಹಿಂದೂಗಳು ಪಾಕಿಸ್ತಾನದ ಅತಿದೊಡ್ಡ ಅಲ್ಪಸಂಖ್ಯಾತರು. ಸಂಸತ್ತಿನ ಚುನಾವಣೆಯಲ್ಲಿ ಇಮ್ರಾನ್ ಖಾನ್ ಗೆಲ್ಲುವ ಒಂದು ವರ್ಷದ ಮೊದಲು, ಪಾಕಿಸ್ತಾನದ ರಾಜಧಾನಿಯಾದ ಇಸ್ಲಾಮಾಬಾದ್‌ನಲ್ಲಿ ಸ್ಥಳೀಯ ಹಿಂದೂ ಸಮಿತಿಗೆ ಭೂಮಿಯನ್ನು ಹಸ್ತಾಂತರಿಸುವ ಮೂಲಕ ಶ್ರೀಕೃಷ್ಣ ಹಿಂದೂ ದೇವಾಲಯದ ನಿರ್ಮಾಣಕ್ಕೆ ಅನುಮೋದನೆ ನೀಡಲಾಯಿತು. ಈಗ, ಪ್ರಭಾವಿ ಧಾರ್ಮಿಕ ಶೈಕ್ಷಣಿಕ ಸಂಸ್ಥೆ ಇದರ ವಿರುದ್ಧ ಫತ್ವಾ (ಧಾರ್ಮಿಕ ಸುಗ್ರೀವಾಜ್ಞೆ) ಹೊರಡಿಸಿದೆ. ಅಲ್ಲದೆ ನಿರ್ಮಾಣ ಕಾರ್ಯಕ್ಕೆ ತಡೆ ಘೋಷಿಸುವಂತೆ ನ್ಯಾಯಾಲಯದ ಮೊರೆ ಹೋಗಿದೆ.
ಇಸ್ಲಾಮಾಬಾದ್‌ನಲ್ಲಿ ಹಿಂದೂ ದೇವಾಲಯದ ನಿರ್ಮಾಣವು ಪಾಕಿಸ್ತಾನದಲ್ಲಿ ಅನೇಕ ಇಸ್ಲಾಮಿಕ್ ಉಗ್ರಗಾಮಿಗಳನ್ನು ಕೆರಳಿಸಿದೆ. ಪಂಜಾಬ್ ಅಸೆಂಬ್ಲಿ ಸ್ಪೀಕರ್ ಚೌಧರಿ ಪರ್ವೈಜ್ ಎಲಾಹಿ ವಿಡಿಯೋ ಹೇಳಿಕೆಯನ್ನು ನೀಡಿ ದೇವಾಲಯವನ್ನು ಸ್ಥಾಪಿಸುವುದನ್ನು ತೀವ್ರವಾಗಿ ವಿರೋಧಿಸಿದ್ದಾರೆ. ಇದು ಇಸ್ಲಾಂ ಧರ್ಮದ ಮನೋಭಾವಕ್ಕೆ ವಿರುದ್ಧವಾಗಿದೆ ಮತ್ತು ಇದು ‘ಮದೀನಾ ದೇಶ’ಕ್ಕೆ ಮಾಡಿದ ಅವಮಾನವಾಗಿದೆ ಎಂದು ಹೇಳಿದ್ದಾರೆ.
“ಇಸ್ಲಾಂ ಧರ್ಮದ ಹೆಸರಿನಲ್ಲಿ ಪಾಕಿಸ್ತಾನ ಅಸ್ತಿತ್ವಕ್ಕೆ ಬಂದಿತು ಮತ್ತು ರಾಜಧಾನಿಯಲ್ಲಿ ಹೊಸ ದೇವಾಲಯವನ್ನು ನಿರ್ಮಿಸುವುದು ಇಸ್ಲಾಂ ಧರ್ಮಕ್ಕೆ ವಿರುದ್ಧವಾಗಿದೆ” ಎಂದು ಎಲಾಹಿ ಹೇಳಿ ಕೊಂಡಿದ್ದಾರೆ. ಮೆಕ್ಕಾವನ್ನು ವಶಪಡಿಸಿಕೊಂಡ ನಂತರ, ಹಜರತ್ ಮುಹಮ್ಮದ್ ಮತ್ತು ಹಜರತ್ ಅಲಿ ಅವರೊಂದಿಗೆ ಬೈತುಲ್ಲಾ ಷರೀಫ್ನಲ್ಲಿ 360 ವಿಗ್ರಹಗಳನ್ನು ಮುರಿದಿದ್ದಾರೆ ಎಂದು ಹೇಳಿದ್ದಾರೆ.
ಇಸ್ಲಾಮಾಬಾದ್ ನಲ್ಲಿ ದೇವಾಲಯದ ನಿರ್ಮಾಣವು 1970 ರ ದಶಕದಲ್ಲಿ ರಾಜಧಾನಿಗೆ ಬಂದ ಹಿಂದೂ ಜನಾಂಗದ ಬಹುಕಾಲದ ಬೇಡಿಕೆಯಾಗಿದೆ. ಸ್ಥಳೀಯ ವರದಿಗಳಲ್ಲಿ, ಹಿಂದೂ ದೇವಾಲಯವು ಒಂದು ಸಣ್ಣ ವಿಗ್ರಹವನ್ನು ಇಡಲು ಮತ್ತು ಕೆಲವೇ ಕೆಲವು ಹಿಂದೂ ಭಕ್ತರಿಗೆ ಪ್ರಾರ್ಥಿಸಲು ಯೋಗ್ಯವಾದ ಸ್ಥಳವಾಗಿದೆ ಎಂದು ಉಲ್ಲೇಖಿಸಲಾಗಿದೆ. ಮೊದಲ ಹಂತದ ನಿರ್ಮಾಣಕ್ಕೆ ಸರ್ಕಾರ 10 ಕೋಟಿ ರೂ.ಗಳನ್ನು ಘೋಷಿಸಿದ್ದರೂ ಸರಕಾರದಿಂದ ಹಣ ಬರದೇ ಇದ್ದಾಗ ಭಕ್ತರು ತಾವೇ ನಿಧಿ ಸಂಗ್ರಹಿಸಿ ನಿಗದಿತ ಜಾಗದಲ್ಲಿ ದೇಗುಲ ನಿರ್ಮಿ ಸುತ್ತಿದ್ದಾರೆ.
ಜಾಮಿಯಾ ಅಶರ್ಫಿಯಾ ಸಂಸ್ಥೆ ಇಸ್ಲಾಮ್ ಹೊರತುಪಡಿಸಿ ಇತರ ಧರ್ಮಗಳ ಅನುಯಾಯಿಗಳಿಗೆ ಪೂಜಾ ಕೇಂದ್ರಗಳನ್ನು ನಿರ್ಮಿಸಲು ಅವ ಕಾಶ ಮಾಡಿಕೊಡಬಾರದು ಎಂದು ಕೋರ್ಟ್‌ನಲ್ಲಿ ವಾದಿಸಿದೆ. ಆದರೆ ಇಸ್ಲಾಮಾಬಾದ್ ಹೈಕೋರ್ಟ್ ದೇಗುಲ ನಿರ್ಮಾಣ ಕಾರ್ಯಕ್ಕೆ ಮಧ್ಯಾಂತರ ತಡೆ ನೀಡಲು ಇಸ್ಲಾಮಾಬಾದ್ ಹೈಕೋರ್ಟ್ ನಿರಾಕರಿಸಿದೆ.