6 ಆರೋಪಿಗಳನ್ನು ವಶಕ್ಕೆ ಪಡೆದ ಸಿಸಿಬಿ
ಬೆಂಗಳೂರು: ಪಿಯುಸಿ ಪ್ರಶ್ನೆ ಪತ್ರಿಕೆಗಳ ಸೋರಿಕೆಯಿಂದ ಕುಖ್ಯಾತಿಯ ಅಪವಾದ ಹೊತ್ತಿರುವ ಕರ್ನಾಟಕದಲ್ಲಿ ಮತ್ತೊಂದು ಅಪವಾದ ಎದುರಾಗಿದೆ. ನಾಳೆ ನಡೆಯಬೇಕಿದ್ದ ಎಫ್ಡಿಎ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದು ಲಕ್ಷಾಂತರ ಅಭ್ಯರ್ಥಿಗಳಿಗೆ ತೀವ್ರ ಆಘಾತ ಉಂಟುಮಾಡಿದೆ.
ಶನಿವಾರ(ಇಂದು) ಕಡ್ಡಾಯ ಭಾಷೆ ಕನ್ನಡ ಪರೀಕ್ಷೆ ಯಶಸ್ವಿಯಾಗಿ ನಡೆದಿತ್ತು. ಆದರೆ, ನಾಳೆ ನಡೆಯಬೇಕಿದ್ದ FDA ಸ್ಪರ್ಧಾತ್ಮಕ ಪರೀಕ್ಷೆಯ ಪ್ರಶ್ನೆ ಪತ್ರಿಕೆ(ಜನರಲ್ ನಾಲೆಡ್ಜ್) ಸೋರಿಕೆಯಾಗಿದೆ.

ಪ್ರಶ್ನೆ ಪತ್ರಿಕೆ ಸೋರಿಕೆಯಾಗಿ ದುಷ್ಕರ್ಮಿಗಳ ಕೈಸೇರಿರುವ ಹಿನ್ನೆಲೆಯಲ್ಲಿ ನಾಳೆ ನಡೆಯಬೇಕಿದ್ದ ಪರೀಕ್ಷೆಯನ್ನು ರದ್ದು ಮಾಡಲಾಗಿದೆ ಎಂದು ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿ ಜಿ ಸತ್ಯವತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
2019ರಲ್ಲಿ ವಿವಿಧ ಇಲಾಖೆಗಳ ಪ್ರಥಮ ದರ್ಜೆ ಸಹಾಯಕ ಹುದ್ದೆಗಳಿಗೆ ನೇಮಕಾತಿಗಾಗಿ ಕೆಪಿಎಸ್ಸಿಯಿಂದ ನೇಮಕಾತಿ ಆದೇಶ ಹೊರಡಿಸಲಾಗಿತ್ತು. ಆದರೆ, ನಾಳೆಯ ಪರೀಕ್ಷೆಗಾಗಿ ಲಕ್ಷಾಂತರ ಅಭ್ಯರ್ಥಿಗಳು ವರ್ಷದಿಂದ ಸಿದ್ಧತೆ ಮಾಡಿಕೊಂಡಿದ್ದರು. ದೂರದ ಊರುಗಳಿಂದ ಬೆಂಗಳೂರು ಸೇರಿ ಪರೀಕ್ಷಾ ಕೇಂದ್ರಗಳಿಗೆ ತೆರಳಿ ನಾಳೆ ಪರೀಕ್ಷೆ ಬರೆಯಲು ಸಿದ್ಧತೆ ಮಾಡಿಕೊಂಡಿದ್ದರು. ಅವರಿಗೆ ಈ ಸುದ್ದಿ ಆಘಾತ ನೀಡಿದೆ.

ಲೀಕಾಸುರರು ಅಂದರ್
ಎಫ್ಡಿಎ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ ದುಷ್ಕರ್ಮಿಗಳನ್ನು ಸಿಸಿಬಿ ಪೊಲೀಸರು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ 6 ಮಂದಿಯ ಹೆಡೆಮುರಿ ಕಟ್ಟಿದ್ದಾರೆ.
ರಾಚಪ್ಪ ಮತ್ತು ಚಂದ್ರು ಸೇರಿದಂತೆ ಆರು ಜನರನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ನಡೆಸಲಾಗಿದೆ. ಬಂಧಿತ ಆರೋಪಿಗಳಿಂದ 24 ಲಕ್ಷ ನಗದು , ಮೂರು ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.
ವಾಣಿಜ್ಯ ತೆರಿಗೆ ಅಧಿಕಾರಿಯಿಂದ ಸೋರಿಕೆ..?
ಎಫ್ಡಿಎ ಪತ್ರಿಕೆಯನ್ನು ಕೋರಮಂಗಲದ ವಾಣಿಜ್ಯ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಅಧಿಕಾರಿ ಚಂದ್ರು ಸೋರಿಕೆ ಮಾಡಿರುವುದು ಬೆಳಕಿದೆ ಬಂದಿದೆ.
ವಾಣಿಜ್ಯ ತೆರಿಗೆ ಇಲಾಖೆಯ ವಿಜಿಲೆನ್ಸ್ ಇನ್ಸ್ಪೆಕ್ಟರ್ ಆಗಿದ್ದ ಚಂದ್ರು ಪ್ರಶ್ನೆ ಪತ್ರಿಕೆ ಪಡೆದು ಮಾರಾಟ ಮಾಡಿದ್ದಾರೆ. ಮೊದಲ ಹಂತದ ವ್ಯಕ್ತಿಯಿಂದ ಪಡೆದು ಬೇರೆ ಜಿಲ್ಲೆಗಳ ವ್ಯಕ್ತಿಗಳಿಗೆ ಮಾರಾಟ ಮಾಡಿದ್ದಾರೆ. ಪ್ರಶ್ನೆ ಪತ್ರಿಕೆ ಸೋರಿಕೆಯ ಎರಡನೇ ಹಂತದ ಡೀಲರ್ ಆಗಿದ್ದ ಚಂದ್ರು ಕಾರ್ಯ ನಿರ್ವಹಿಸಿದ್ದಾರೆ. ಈ ಪತ್ರಿಕೆ ಪಡೆಯಲು ಬೆಳಗಾವಿ, ಅಥಣಿ, ಶಿವಮೊಗ್ಗ, ಬೆಂಗಳೂರು ಸೇರಿ ಬೇರೆ ಕಡೆಗಳಿಂದ ಬಂದಿದ್ದ ಐದು ಜನರ ಬಂಧಿಸಲಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








