ಧನ್ಯವಾದ ಮಾಸ್ಟರ್…! ದೇವರ ಕೈ ಹಿಡಿದಂತೆ ನನಗೆ ಭಾಸವಾಗಿತ್ತು..,- ಯುವರಾಜ್ ಸಿಂಗ್
ಯುವರಾಜ್ ಸಿಂಗ್ ಅವರು ಸದಾ ಸುದ್ದಿಯಲ್ಲಿರುತ್ತಾರೆ. ಮೈದಾನದೊಳಗೆ, ಮೈದಾನದಿಂದ ಹೊರಗಡೆ ಇದ್ರೂ ಯುವರಾಜ್ ಸಿಂಗ್ ಸುದ್ದಿಯ ಕೇಂದ್ರ ಬಿಂದು. ಇದೀಗ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ ನಂತರವೂ ಸಾಮಾಜಿಕ ಜಾಲ ತಾಣದಲ್ಲಿ ಬಿಝಿಯಾಗಿರುತ್ತಾರೆ. ಕೆಲವೊಮ್ಮೆ ತಮಾಷೆಯಾಗಿ, ಮತ್ತೆ ಕೆಲವು ಬಾರಿ ವಿವಾದಾತ್ಮಕವಾಗಿ, ಇನ್ನೊಂದು ಬಾರಿ ಮಾನವೀಯತೆಯ ಮೂಲಕ ಯುವಿ ತಮ್ಮ ಅಭಿಮಾನಿಗಳ ಗಮನವನ್ನು ಸೆಳೆಯುತ್ತಿರುತ್ತಾರೆ.
ಇದೀಗ ಲಾಕ್ ಡೌನ್ ಟೈಮ್ ನಲ್ಲಿ ತಮ್ಮ ಕ್ರಿಕೆಟ್ ದಿನಗಳಲ್ಲಿ ನಡೆದಿರುವಂತಹ ಕೆಲವೊಂದು ಘಟನೆಗಳನ್ನು ನೆನಪು ಮಾಡಿಕೊಂಡಿದ್ದಾರೆ. ಇದೀಗ ಅಂತಹುದ್ದೇ ಒಂದು ಕ್ಷಣವನ್ನು ನೆನಪಿಸಿಕೊಂಡು ಸಾಮಾಜಿಕ ಜಾಲ ತಾಣದಲ್ಲಿ ತನ್ನ ಅನುಭವಗಳನ್ನು ತಮ್ಮ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.
ಹೌದು, ನಿಮಗೆ ಸಚಿನ್ ತೆಂಡುಲ್ಕರ್ ಮತ್ತು ಯುವರಾಜ್ ಸಿಂಗ್ ಆಪ್ತಮಿತ್ರರು ಎಂಬುದು ಗೊತ್ತು. ಕ್ಯಾನ್ಸರ್ ನಿಂದ
ಬಳಲುತ್ತಿದ್ರೂ 2011ರ ವಿಶ್ವಕಪ್ ಟೂರ್ನಿಯನ್ನು ಸಚಿನ್ಗಾಗಿ ಗೆಲ್ಲಬೇಕು ಅಂತ ಹಠದಲ್ಲೇ ಆಡಿದ್ದವರು ಯುವರಾಜ್ ಸಿಂಗ್. ಅಷ್ಟೇ ಅಲ್ಲ, ಸಚಿನ್ ಜೊತೆ ತಮಾಷೆಗಾಗಿ ಕಾಲೆಳೆಯುತ್ತಾ, ಸವಾಲುಗಳನ್ನು ಹಾಕುತ್ತಿದ್ದರು ಯುವರಾಜ್ ಸಿಂಗ್.
ಸದ್ಯದ ಸುದ್ದಿ ಏನು ಅಂದ್ರೆ, ಯುವರಾಜ್ ಸಿಂಗ್ಗೆ ಸಚಿನ್ ಅವರನ್ನು ಮೊದಲ ಬಾರಿ ನೋಡಿದಾಗ ಏನು ಅನ್ನಿಸಿತ್ತು ಎಂಬುದನ್ನು ಹೇಳಿಕೊಂಡಿದ್ದಾರೆ. ಸಚಿನ್ ಅವರ ಕೈ ಸ್ಪರ್ಶ ಮಾಡಿದಾಗ ನನಗೆ ದೇವರೇ ಕೈ ಸ್ಪರ್ಶ ಮಾಡಿದ್ದಂತೆ ಭಾಸವಾಗಿತ್ತು ಅಂತ ಯುವರಾಜ್ ಸಿಂಗ್ ಹೇಳಿದ್ದಾರೆ.
ಅಂದ ಹಾಗೇ, ಯುವರಾಜ್ ಸಿಂಗ್ 2000ದಲ್ಲಿ ಐಸಿಸಿ ನಾಕೌಟ್ ಏಕದಿನ ಟೂರ್ನಿಯ ಮೂಲಕ ಟೀಮ್ ಇಂಡಿಯಾಗೆ ಎಂಟ್ರಿಯಾದ್ರು. ಯುವರಾಜ್ ಸಿಂಗ್ ಅವರು ನಾಯಕ ಸೌರವ್ ಗಂಗೂಲಿಯ ಅನ್ವೇಷಣೆ ಎಂದ್ರೂ ತಪ್ಪೇನೂ ಇಲ್ಲ. ಇಂತಹ ಯುವರಾಜ್ ಸಿಂಗ್, ಗಂಗೂಲಿ, ದ್ರಾವಿಡ್, ಸಚಿನ್ ಜೊತೆ ಆಡಿದ್ದಾರೆ. ಅಲ್ಲದೆ ಧೋನಿಯ ನಾಯಕತ್ವದಲ್ಲಿ 2007ರ ಟಿ-ಟ್ವೆಂಟಿ ವಿಶ್ವಕಪ್ ಹಾಗೂ 2011ರ ಏಕದಿನ ವಿಶ್ವಕಪ್ ಟೂರ್ನಿಗಳನ್ನು ಗೆಲ್ಲುವಲ್ಲಿ ಯುವಿ ಪ್ರಮುಖ ಪಾತ್ರ ವಹಿಸಿದ್ದರು ಎಂಬುದನ್ನು ಸಹ ಪದೇ ಪದೇ ಹೇಳಬೇಕಾಗಿಲ್ಲ.
ಧನ್ಯವಾದ ಮಾಸ್ಟರ್… ನಾನು ನಿಮ್ಮನ್ನು ಮೊದಲ ಬಾರಿ ಭೇಟಿಯಾದಾಗ ನನಗೆ ದೇವರ ಕೈ ಸ್ಪರ್ಶ ಮಾಡಿದಂತೆ ಭಾಸವಾಗಿತ್ತು. ನೀವು ನನಗೆ ಮಾರ್ಗದರ್ಶನ ನೀಡಿದ್ದೀರಿ.. ಹಾಗೇ ನನ್ನ ಸಾಮಥ್ರ್ಯದ ಬಗ್ಗೆ ನನಗೆ ನಂಬಿಕೆ ಬರುವಂತೆ ನೀವು ಕಲಿಸಿಕೊಟ್ಟಿದ್ದೀರಿ ಅಂತ ಯುವರಾಜ್ ಸಿಂಗ್ ತನ್ನ ಟ್ವಿಟರ್ ಖಾತೆಯಲ್ಲಿ ಈ ರೀತಿ ಬರೆದುಕೊಂಡಿದ್ದಾರೆ.
ಇದಕ್ಕು ಮೊದಲು ಯುವರಾಜ್ ಸಿಂಗ್ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ ದಿನ ಸಚಿನ್ ತೆಂಡುಲ್ಕರ್ ಕೂಡ ಟ್ವಿಟ್ ಮಾಡಿ ನೆನಪಿಸಿಕೊಂಡಿದ್ದರು. ಈ ಹಿಂದೆ ಎರಡು ಬಾರಿ ಯುವರಾಜ್ ಸಿಂಗ್ ಮೈದಾನದಲ್ಲೇ ಸಚಿನ್ ತೆಂಡುಲ್ಕರ್ ಅವರ ಕಾಲಿಗೆ ಬಿದ್ದು ನಮಸ್ಕಾರ ಕೂಡ ಮಾಡಿದ್ದರು. ಅಲ್ಲದೆ ಸಚಿನ್ ಜೊತೆ ತುಂಬಾ ಆತ್ಮೀಯವಾಗಿ ಒಡನಾಟ ಇಟ್ಟುಕೊಂಡವರಲ್ಲಿ ಯುವಿ ಕೂಡ ಒಬ್ಬರು.
ಇತ್ತೀಚೆಗೆ ಯುವರಾಜ್ ಸಿಂಗ್ ಸಾಮಾಜಿಕ ಜಾಲ ತಾಣದಲ್ಲಿ ರೋಹಿತ್ ಜೊತೆ ಯುಜುವೇಂದ್ರ ಚಾಹಲ್ ಬಗ್ಗೆ ಮಾತನಾಡುತ್ತಿರುವಾಗ ಜಾತಿ ನಿಂದನೆ ಮಾಡಿದ್ದಾರೆ ಅಂತ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿತ್ತು. ಆನಂತರ ಯುವರಾಜ್ ಸಿಂಗ್ ಕ್ಷಮೆ ಕೇಳಿ ಈ ವಿವಾದಕ್ಕೆ ತೆರೆ ಎಳೆದಿದ್ದರು.
ಸಿಕ್ಸರ್ ಸಿಂಗ್ ಎಂದೇ ಖ್ಯಾತಿ ಪಡೆದಿದ್ದ ಯುವರಾಜ್ ಸಿಂಗ್ ಟೀಮ್ ಇಂಡಿಯಾದ ಬೆನ್ನುಲುಬಾಗಿದ್ದರು. ಬೌಲಿಂಗ್, ಬ್ಯಾಟಿಂಗ್ ಹಾಗೂ ಅದ್ಭುತ ಫೀಲ್ಡಿಂಗ್ ಮೂಲಕವೂ ಗಮನ ಸೆಳೆದಿದ್ದರು. ಹಾಗೇ ಕ್ಯಾನ್ಸರ್ನಿಂದ ಗುಣಮುಖರಾದ ನಂತರವೂ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದುಕೊಂಡಿದ್ದ ಯುವಿ, ಆನಂತರ ತನ್ನ ಹಿಂದಿನ ಆಟವನ್ನು ಆಡಲು ಸಾಧ್ಯವಾಗಲಿಲ್ಲ. ಯುವ ಆಟಗಾರರ ಅಬ್ಬರದಿಂದ ಯುವಿ ಸದ್ದಿಲ್ಲದೆ ತೆರೆಮರೆಗೆ ಸರಿಯಬೇಕಾಯ್ತು.








