ಬೆಂಗಳೂರು: ವಕ್ಫ್ ಮಂಡಳಿ (Waqf Board) ರದ್ದಾಗಬೇಕೆಂದು ವಿಪಕ್ಷ ನಾಯಕ ಆರ್. ಅಶೋಕ್ ವಾಗ್ದಾಳಿ ನಡಿದ್ದಾರೆ.
ಫ್ರೀಡಂ ಪಾರ್ಕ್‌ನಲ್ಲಿ (Freedom Park) ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಇಂಜಿನಿಯರ್ ಸರ್ ಎಂ.ವಿಶ್ವೇಶ್ವರಯ್ಯ ಅವರು ಓದಿದ ಶಾಲೆಯ ಆವರಣವನ್ನೂ ವಕ್ಫ್ ಕಬಳಿಸಿದೆ. ಕೇಂದ್ರದಲ್ಲಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ವಕ್ಫ್ ಮಂಡಳಿಗೆ ನ್ಯಾಯಾಂಗದ ಅಧಿಕಾರ ನೀಡಿದೆ. ಇದನ್ನು ಬಳಸಿಕೊಂಡು ವಕ್ಫ್ ಮಂಡಳಿ ರೈತರ ಜಮೀನು ನುಂಗುತ್ತಿದೆ. ವಕ್ಪ್ ಮಿನಿ ಪಾಕಿಸ್ತಾನ ನಿರ್ಮಿಸುತ್ತಿದೆ. ವಿಧಾನಸೌಧ, ಲಾಲ್‌ಬಾಗ್ ಕೂಡ ನಮ್ಮದು ಎಂದು ಇವರು ಹೇಳುತ್ತಾರೆ ಎಂದು ಆರೋಪಿಸಿದ್ದಾರೆ.
ಬೌರಿಂಗ್ ಆಸ್ಪತ್ರೆಯದ್ದು 2 ಎಕರೆ ಜಮೀನು ಇದ್ದು, ಅದನ್ನು ಕೂಡ ವಕ್ಫ್ ಮಂಡಳಿ ಕಬಳಿಕೆ ಮಾಡಿತ್ತು. ನಾನು ಸಚಿವನಾಗಿದ್ದಾಗ ಅದರ ದಾಖಲೆಗಳನ್ನು ತರಿಸಿ ನೋಡಿದರೆ ಯಾವುದೋ ಹಳೆಯ ದಾಖಲೆಗಳನ್ನು ತಂದಿದ್ದರು. ಆನಂತರ ಆಸ್ತಿ ಉಳಿಸಲಾಯಿತು ಎಂದಿದ್ದಾರೆ.
ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಬಳಿಕ ಮುಸ್ಲಿಮರಿಗೆ ಎರಡು ಕೊಂಬು ಬಂದಿದೆ. ಸಿದ್ದರಾಮಯ್ಯ ಎಂದರೆ ಅಹಿಂದ ನಾಯಕ ಅಲ್ಲ. ಅವರೀಗ ಮುಸ್ಲಿಮರ ಚಾಂಪಿಯನ್ ಆಗಲು ಮುಂದಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಮಂತ್ರಾಲಯ, ವಿಧಾನಸೌಧ, ವಿಶ್ವೇಶ್ವರಯ್ಯನವರ ಶಾಲೆ, ಬಡವರ ಭೂಮಿ ಉಳಿಯಲು ಸೂಪರ್‌ಮ್ಯಾನ್ ಆಗಿ ಪ್ರಧಾನಿ ನರೇಂದ್ರ ಮೋದಿ ಬರಲಿದ್ದಾರೆ. ಅವರು ತರಲಿರುವ ತಿದ್ದುಪಡಿ ಮಸೂದೆಯಿಂದ ಎಲ್ಲವೂ ನಿಯಂತ್ರಣಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.