ಹೊಸದಿಲ್ಲಿ, ಜೂನ್ 7: ದೇಶದಲ್ಲಿ ಕಳೆದ ಎರಡು ತಿಂಗಳಿನಿಂದ ಜಾರಿಯಲ್ಲಿದ್ದ ಲಾಕ್ ಡೌನ್ ನಿಯಮಗಳಲ್ಲಿ ಸಾಕಷ್ಟು ಸಡಿಲಿಕೆಯಾಗಿದ್ದು, ವ್ಯಾಪಾರ ವಹಿವಾಟುಗಳು ನಿಧಾನವಾಗಿ ತೆರೆದುಕೊಳ್ಳುತ್ತಿದೆ. ಲಾಕ್ ಡೌನ್ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿದ ಜನರಿಗೆ ಸರ್ಕಾರವು ಅನೇಕ ಯೋಜನೆಗಳ ಮೂಲಕ, ಪರಿಹಾರ ಧನಗಳ ಮೂಲಕ ನೆರವು ನೀಡುತ್ತಿದೆ.
ಅಷ್ಟೇ ಅಲ್ಲ ಹಣಕಾಸಿಗೆ ಸಂಬಂಧಿಸಿದಂತೆ ಕೂಡ ಮಾರ್ಚ್ 31, 2020 ರೊಳಗೆ ಮುಗಿಸಬೇಕಾಗಿದ್ದ ಕೆಲಸವನ್ನು ಜೂನ್ 30, 2020 ರವರೆಗೆ ಮುಂದೂಡಿ ಆದೇಶಿಸಿತ್ತು.
ಜೂನ್ 30, 2020 ರ ಒಳಗೆ ಪೂರ್ಣಗೊಳಿಸಬೇಕಾದ ಹಣಕಾಸಿನ ಕೆಲಸದ ವಿವರಗಳು ಹೀಗಿವೆ.
ಪ್ಯಾನ್-ಆಧಾರ್ ಲಿಂಕ್:
ಮಾರ್ಚ್ 31 ರ ಒಳಗೆ ಪ್ಯಾನ್ ಕಾರ್ಡ್ ಅನ್ನು ಆಧಾರ್ ಗೆ ಲಿಂಕ್ ಮಾಡಬೇಕೆಂದು ನೀಡಿದ್ದ ಗಡುವನ್ನು ಸರ್ಕಾರ ಜೂನ್ 30ಕ್ಕೆ ಮುಂದೂಡಿದೆ. ಜೂನ್ 30ರ ಒಳಗೆ ಆಧಾರ್ ಕಾರ್ಡ್ ಅನ್ನು ಪ್ಯಾನ್‌ನೊಂದಿಗೆ ಲಿಂಕ್ ಮಾಡದಿದ್ದರೆ ಜೂನ್ 30 ರ ನಂತರ ಪ್ಯಾನ್ ಕಾರ್ಡ್ ರದ್ದುಗೊಳ್ಳುತ್ತದೆ.
ತೆರಿಗೆ ರಿಯಾಯಿತಿ ಪಡೆಯಲು ಹೂಡಿಕೆ:
ಆದಾಯ ತೆರಿಗೆ ಇಲಾಖೆ 2019-20ರ ಹಣಕಾಸು ವರ್ಷಕ್ಕೆ ಐಟಿಆರ್ ಸಲ್ಲಿಸಲು ಕೊನೆಯ ದಿನಾಂಕವನ್ನು ಜುಲೈ 31 ರಿಂದ ನವೆಂಬರ್ 30 ರವರೆಗೆ ಮುಂದೂಡಿದೆ. ತೆರಿಗೆ ಉಳಿಸಲು, ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 ಸಿ, 80 ಡಿ, 80 ಇ ಅಡಿಯಲ್ಲಿ ಹೂಡಿಕೆ ಮಾಡುವ ಅವಧಿಯ ಅಂತಿಮ ದಿನಾಂಕ ಜೂನ್ 30 ಆಗಿದೆ.
2018-19ರ ಐಟಿಆರ್:
2018-19ರ ಹಣಕಾಸು ವರ್ಷಕ್ಕೆ ನೀವು ಇನ್ನೂ ಐಟಿಆರ್ ರಿಟರ್ನ್ ಅನ್ನು ಭರ್ತಿ ಮಾಡಿರದಿದ್ದರೆ, ಅದನ್ನು ನೀವು ಸಲ್ಲಿಸಬಹುದು. ಜೊತೆಗೆ ಪರಿಷ್ಕೃತ ಐಟಿಆರ್ ಅನ್ನು ಸಹ ಜೂನ್ 30 ರೊಳಗೆ ಸಲ್ಲಿಸಬಹುದು.
ಉದ್ಯೋಗಿಗಳಿಗೆ ಫಾರ್ಮ್ 16:
ಸಾಮಾನ್ಯವಾಗಿ ಉದ್ಯೋಗಿಗಳು ತಮ್ಮ ಕಂಪನಿಯ ಪರವಾಗಿ ಮೇ ತಿಂಗಳಲ್ಲಿ ಫಾರ್ಮ್ 16 ಅನ್ನು ಪಡೆಯುತ್ತಾರೆ. ಆದರೆ
ಈ ಬಾರಿ ಸರ್ಕಾರವು ಸುಗ್ರೀವಾಜ್ಞೆಯ ಮೂಲಕ ಜೂನ್ 15 ರಿಂದ ಜೂನ್ 30 ರ ನಡುವಿನ ದಿನಾಂಕವನ್ನು ನೀಡಿದೆ. ಫಾರ್ಮ್ 16 ಟಿಡಿಎಸ್ ರೀತಿಯ ಪ್ರಮಾಣಪತ್ರವಾಗಿದ್ದು, ಐಟಿಆರ್ ಸಲ್ಲಿಸುವಾಗ ಅಗತ್ಯವಾಗಿರುತ್ತದೆ.
ಸಣ್ಣ ಉಳಿತಾಯ ಖಾತೆಯ ಠೇವಣಿ:
ನೀವು ಯಾವುದೇ ಕನಿಷ್ಠ ಮೊತ್ತವನ್ನು ಪಿಪಿಎಫ್ ಅಥವಾ ಸುಕನ್ಯಾ ಸಮೃದ್ಧಿ ಖಾತೆಯಲ್ಲಿ ಮಾರ್ಚ್ 31, 2020ರ ಒಳಗೆ ಜಮಾ ಮಾಡದಿದ್ದ ಪಕ್ಷದಲ್ಲಿ, ಜೂನ್ 30 ರ ಒಳಗೆ ಈ ಕೆಲಸವನ್ನು ಪೂರ್ಣ ಮಾಡಬಹುದು. ಕನಿಷ್ಠ ಮೊತ್ತವನ್ನು ಠೇವಣಿ ಮಾಡದಿದ್ದ ಪಕ್ಷದಲ್ಲಿ ದಂಡ ವಿಧಿಸುವ ಅವಕಾಶವಿದ್ದು, ಪ್ರಸ್ತುತ ಅಂಚೆ ಇಲಾಖೆಯಿಂದ ಅದನ್ನು ಹಿಂಪಡೆಯಲಾಗಿದೆ.
ಪಿಪಿಎಫ್ ಖಾತೆ :
ನಿಮ್ಮ ಪಿಪಿಎಫ್ ಖಾತೆಯು ಮಾರ್ಚ್ 31 ರಂದು ಪ್ರಬುದ್ಧವಾಗಿದ್ದು, ನೀವು ಮುಂದಿನ ಐದು ವರ್ಷಗಳವರೆಗೆ ಅದನ್ನು ಮುಂದುವರಿಸಲು ಬಯಸಿದರೆ, ಜೂನ್ 30 ರ ಒಳಗೆ ಅವುಗಳನ್ನು ಪೂರ್ಣಗೊಳಿಸಲು ಸಾಧ್ಯವಿದೆ. ಇದಕ್ಕೆ ಸಂಬಂಧಿಸಿದಂತೆ ಅಂಚೆ ಇಲಾಖೆ ಏಪ್ರಿಲ್ 11 ರಂದು ಸುತ್ತೋಲೆ ಹೊರಡಿಸಿದೆ.