ಟೋಕನ್ ರೂ 1 ರ ದಂಡವನ್ನು ಪಾವತಿಸಲಾಗುವುದು – ಸುಪ್ರೀಂ ಆದೇಶದ ನಂತರ ಭೂಷಣ್ ಪ್ರತಿಕ್ರಿಯೆ
ಹೊಸದಿಲ್ಲಿ, ಸೆಪ್ಟೆಂಬರ್01: ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರು ನ್ಯಾಯಾಂಗ ನಿಂದನೆ ಟ್ವೀಟ್ ಮಾಡಿದ ಪ್ರಕರಣದಲ್ಲಿ ಸೋಮವಾರ ಸುಪ್ರೀಂ ಕೋರ್ಟ್ ನಿಂದ ದಂಡಕ್ಕೆ ಒಳಗಾದ ಬಳಿಕ ರೂ 1 ರ ಟೋಕನ್ ದಂಡವನ್ನು ಹಿರಿಯ ವಕೀಲ ರಾಜೀವ್ ಧವನ್ ಅವರಿಂದ ಸ್ವೀಕರಿಸುತ್ತಿರುವ ಫೋಟೋವನ್ನು ಪ್ರಕಟಿಸಿ ಗೌರವ ಪೂರ್ವಕವಾಗಿ ರೂ 1 ರ ಟೋಕನ್ ದಂಡವನ್ನು ಪಾವತಿಸಲಾಗುವುದು ಎಂದು ಟ್ವೀಟ್ ಮಾಡಿದ್ದಾರೆ.
ಆದರೆ, ತಮ್ಮ ಟ್ವೀಟ್‌ಗಳು ಸುಪ್ರೀಂ ಕೋರ್ಟ್‌ಗೆ ಅಥವಾ ಭಾರತದ ಮುಖ್ಯ ನ್ಯಾಯಾಧೀಶರಿಗೆ ಅಗೌರವ ತೋರುವ ಉದ್ದೇಶ ಹೊಂದಿರಲಿಲ್ಲ ಎಂದು ಅವರು ಸಮರ್ಥಿಸಿಕೊಂಡರು. ತೀರ್ಪನ್ನು ಪರಿಶೀಲಿಸುವ ಹಕ್ಕನ್ನು ನಾನು ಕಾಯ್ದಿರಿಸಿದ್ದರೂ, ದಂಡವನ್ನು ಗೌರವಯುತವಾಗಿ ಪಾವತಿಸುತ್ತೇನೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಹೇಳಿದರು. ಪ್ರತಿಯೊಬ್ಬ ಭಾರತೀಯನು ಬಲವಾದ ನ್ಯಾಯಾಂಗ ವ್ಯವಸ್ಥೆಯನ್ನು ಬಯಸುತ್ತಾನೆ ಮತ್ತು ನ್ಯಾಯಾಲಯವು ದುರ್ಬಲಗೊಂಡರೆ ಅದು ಗಣರಾಜ್ಯವನ್ನು ದುರ್ಬಲಗೊಳಿಸುತ್ತದೆ ಎಂದು ಅವರು ಹೇಳಿದರು.
https://twitter.com/pbhushan1/status/1300348492322205696
ನಿವೃತ್ತ ನ್ಯಾಯಾಧೀಶರ ಬಗ್ಗೆ ಭೂಷಣ್ ಟೀಕಿಸಿದ್ದಕ್ಕೆ ನ್ಯಾಯಪೀಠ ತನ್ನ ಬೇಸರವನ್ನು ವ್ಯಕ್ತಪಡಿಸಿತು. ಟೀಕೆ ಸ್ವಾಗತಾರ್ಹವಾದರೂ, ಒಬ್ಬ ನ್ಯಾಯಾಧೀಶರ ಮೇಲೆ ವಿನಾಕಾರಣ ಆರೋಪಿಸಬಾರದು ಏಕೆಂದರೆ ಅವರು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಪತ್ರಿಕೆಗಳಿಗೆ ಹೋಗಲು ಸಾಧ್ಯವಿಲ್ಲ ಮತ್ತು ತೀರ್ಪುಗಳ ಮೂಲಕ ಮಾತ್ರ ಮಾತನಾಡಬಹುದು. ವಾಕ್ ಸ್ವಾತಂತ್ರ್ಯವನ್ನು ಮೊಟಕುಗೊಳಿಸಲು ಸಾಧ್ಯವಿಲ್ಲ ಆದರೆ ಇತರರ ಹಕ್ಕುಗಳನ್ನು ಗೌರವಿಸಬೇಕಾಗಿದೆ ಎಂದು ನ್ಯಾಯಾಲಯ ಹೇಳಿದೆ.








