ಉಡುಪಿ: ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಸೇರಿದಂತೆ 11 ಜನರ ವಿರುದ್ಧ ದೂರು ದಾಖಲಾಗಿದ್ದು, ಪೊಲೀಸರು ಎಫ್ ಐಆರ್ ಹಾಕಿದ್ದಾರೆ.
ಸಿಎಂ ಸಿದ್ದರಾಮಯ್ಯ (Siddaramaiah) ಅವರ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಅವರ ಪ್ರತಿಕೃತಿಗೆ ಚಪ್ಪಲಿ ಏಟು ಹಾಗೂ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ (Yashpal Suvarna) ಸೇರಿದಂತೆ 11 ಜನರ ವಿರುದ್ಧ ಎಫ್ ಐಆರ್ ದಾಖಲಾಗಿದೆ.
ಪ್ರಾಂಶುಪಾಲರಿಗೆ ನೀಡಿದ್ದ ಉತ್ತಮ ಪ್ರಾಂಶುಪಾಲ ಪ್ರಶಸ್ತಿಯನ್ನು ಹಿಂಪಡೆದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಶಸ್ತಿ ಹಿಂಪಡೆದ ವಿಚಾರವಾಗಿ ಮಣಿಪಾಲದ (Manipal) ಸಿಂಡಿಕೇಟ್ ಸರ್ಕಲ್ ನಲ್ಲಿ ಸೆ. 6ರಂದು ಪ್ರತಿಭಟನೆ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಹೆದ್ದಾರಿ ತಡೆದು ಬಿಜೆಪಿ ಮುಖಂಡರು ಸಿಎಂ ಪ್ರತಿಕೃತಿಗೆ ಬೆಂಕಿ ಹಚ್ಚಿ ಪ್ರತಿಭಟಿಸಿದ್ದರು.
ಹಿಂದೂ ವಿರೋಧಿ ಸಿದ್ದರಾಮಯ್ಯ ತೊಲಗಿಸಿ ಎಂದು ಘೋಷಣೆ ಕೂಡ ಕೂಗಿದ್ದರು. ನಗರಸಭಾ ಸದಸ್ಯ ಗಿರೀಶ್ ಅಂಚನ್, ಯುವ ಮೋರ್ಚಾ ಮುಖಂಡ ಪೃಥ್ವಿರಾಜ್ ಶೆಟ್ಟಿ ಸಿಎಂ ಪ್ರತಿಕೃತಿಗೆ ಚಪ್ಪಲಿಯಿಂದ ಹೊಡೆದಿದ್ದರು. ಹೀಗಾಗಿ ಎನ್ ಎಸ್ ಯುಐ ಮುಖಂಡ ಸೌರಭ್ ಬಲ್ಲಾಳ್ ಶಾಂತಿಭಂಗ ತರುವ ಉದ್ದೇಶದಿಂದ ಕೃತ್ಯ ಎಸೆಗಿದ್ದಾರೆ ಎಂದು ದೂರು ನೀಡಿದ್ದರು. ಹೀಗಾಗಿ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ.
ಈ ಪ್ರಕರಣದಲ್ಲಿ ಯಶ್‌ಪಾಲ್ ಸುವರ್ಣ ಎ5 ಆಗಿದ್ದಾರೆ. ನಗರಸಭಾ ಅಧ್ಯಕ್ಷ ಸೇರಿದಂತೆ ಹಲವರ ವಿರುದ್ಧ ದೂರು ದಾಖಲಾಗಿದೆ. ಈ ಕುರಿತು ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.