ರಾಯಚೂರು: ಪಿಡಿಓ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂದು ಪ್ರತಿಭಟನೆ ನಡೆಸಿದ ಪಿಡಿಓ ಅಭ್ಯರ್ಥಿಗಳ ಮೇಲೆ ಎಫ್ ಐಆರ್ ದಾಖಲಾಗಿದೆ.
12 ಜನ ಹಾಗೂ ಇತರೆ ಪಿಡಿಓ ಪರೀಕ್ಷಾರ್ಥಿಗಳ ವಿರುದ್ಧ ಸಿಂಧನೂರು (Sidhanuru) ನಗರ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ. ರಾಯಚೂರಿನ (Raichur) ಸಿಂಧನೂರಿನ ಸರ್ಕಾರಿ ಪದವಿ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (PDO) ಹುದ್ದೆ ಪರೀಕ್ಷೆಯಲ್ಲಿ ಅಕ್ರಮ, ಪೇಪರ್ ಲೀಕ್ ಆರೋಪಿಸಿ ಪರೀಕ್ಷೆ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದ್ದರು.
ಪರೀಕ್ಷಾ ಮೇಲ್ವಿಚಾರಕ ಬಸವರಾಜ ತಡಕಲ್ ದೂರು ನೀಡಿದ್ದು, ಪರೀಕ್ಷಾರ್ಥಿಗಳ ವಿರುದ್ಧ ಸಿಂಧನೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಹುತೇಕ ಯಾದಗಿರಿ ಜಿಲ್ಲೆಯ ಪರೀಕ್ಷಾರ್ಥಿಗಳ ಮೇಲೆ ಪ್ರಕರಣ ದಾಖಲಾಗಿದೆ. ಪೊಲೀಸರು ಓರ್ವ ಪರೀಕ್ಷಾರ್ಥಿ ವಶಕ್ಕೆ ಪಡೆದು ಸ್ಟೇಷನ್ ಬೇಲ್ ಮೇಲೆ ಬಿಟ್ಟಿದ್ದಾರೆ.
ಪರೀಕ್ಷಾ ವೀಕ್ಷಕರೊಂದಿಗೆ ವಾಗ್ವಾದ ಮಾಡಿ, ಪರೀಕ್ಷಾ ನಿಯಮಗಳ ಉಲ್ಲಂಘನೆ ಮಾಡಿದ್ದಾರೆ. ಪರೀಕ್ಷೆ ಬರೆಯಲು ಕುಳಿತಿದ್ದ ವಿದ್ಯಾರ್ಥಿಗಳಿಗೆ ಪ್ರಚೋದನೆ ನೀಡಿದ್ದಾರೆ. ಇತರ ಪರೀಕ್ಷಾರ್ಥಿಗಳು ಕೊಠಡಿಗಳಿಂದ ಹೊರ ಬರುವಂತೆ ಮಾಡಿ, ರಸ್ತೆಗಿಳಿದು ಪ್ರತಿಭಟನೆ ಮಾಡಿದ್ದಾರೆ ಸೇರಿದಂತೆ ಹಲವು ಕಾರಣಗಳನ್ನು ನೀಡಿ ಎಫ್ ಐಆರ್ ದಾಖಲಿಸಲಾಗಿದೆ.
ಒಂದು ಕೇಂದ್ರದಲ್ಲಿ 24 ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿತ್ತು. ಆದರೆ ಕೊಠಡಿಗೆ 24 ಪ್ರಶ್ನೆಪತ್ರಿಕೆ ಬದಲು ಕೇವಲ 12 ಪ್ರಶ್ನೆಪ್ರತಿಕೆಯನ್ನು ಕೆಪಿಎಸ್ಸಿ ಕಳುಹಿಸಿದೆ ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬ ಆತಂಕ ಅಭ್ಯರ್ಥಿಗಳನ್ನು ಕಾಡಿದೆ.