ಸಿಲಿಂಡರ್ ಸೋರಿಕೆ – ಮೂವರು ಸಹೋದರಿಯರ ಸಾವು
ಉತ್ತರಪ್ರದೇಶ : ಸಿಲಿಂಡರ್ ಸೋರಿಕೆಯಾದ ಪರಿಣಾಮ (ಅಡುಗೆ ಅನಿಲದ ಸಿಲಿಂಡರ್) ದೊಡ್ಡ ದುರಂತ ಸಂಭವಿಸಿದ್ದು, ಮೂವರು ಸಹೋದರಿಯರು ಸಜೀವ ದಹನವಾಗಿರುವ ಕುರುಳು ಹಿಂಡುವ ಘಟನೆ ಉತ್ತರಪ್ರದೇಶದ ಅಹ್ರೌಲದಲ್ಲಿ ನಡೆದಿದೆ. ದೀಪಾಂಜಲಿ (11), ಶಿವಂಸಿ (6), ಶೆರ್ಜಲ್ ಮೃತಪಟ್ಟ ಸಹೋದರಿಯರಾಗಿದ್ದಾರೆ. ಭಾನುವಾರ ಸಂಜೆ ತಾಯಿ ನೀರು ತರಲು ಹೊರ ಹೋಗಿದ್ದರು. ಈ ವೇಳೆ ಅಡುಗೆ ಮನೆಯಲ್ಲಿದ್ದ ಸಿಲಿಂಡರ್ ಸೋರಿಕೆಯಾಗಿದ್ದು, ಬೆಂಕಿ ಹತ್ತಿಕೊಂಡಿದೆ.
ಕ್ರಮೇಣ ಬೆಂಕಿ ಮನೆಯನ್ನು ಆವರಿಸಿದೆ. ಅಡುಗೆ ಮನೆಯಲ್ಲೇ ಇದ್ದ ಸಹೋದರಿಯರು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ರಕ್ಷಣೆಗಾಗಿ ಕೂಗಿದ್ದಾರೆ. ಗ್ರಾಮಸ್ಥರು ಆಗಮಿಸಿ ಬೆಂಕಿ ನಂದಿಸಿ ಬಾಲಕಿಯರನ್ನು ಹೊರ ತಂದಿದ್ದಾರೆ. ಆದರೆ ಸುಟ್ಟ ಗಾಯಗಳಿಂದ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿ ದೀಪಾಂಜಲಿ, ಶಿವಂಸಿ ಮೃತಪಟ್ಟಿದ್ದಾರೆ. ಚಿಕಿತ್ಸೆಯ ವೇಳೆ ಶೆರ್ಜಲ್ ಕೂಡ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.








