ಸಾಂದರ್ಭಿಕ ಚಿತ್ರ
ಬೆಂಗಳೂರು: ಗ್ರಂಥಿಗೆ ಅಂಗಡಿಯಲ್ಲಿ ಕಾಣಿಸಿಕೊಂಡ ಅಗ್ನಿ ಆಕಸ್ಮಿಕದಲ್ಲಿ ಮಾಲೀಕ ಸಜೀವ ದಹನವಾದ ಘಟನೆ ಬೆಂಗಳೂರಿನ ಅವೆನ್ಯೂ ರಸ್ತೆಯಲ್ಲಿ ನಡೆದಿದೆ.
ಅವೆನ್ಯೂ ರಸ್ತೆಯಲ್ಲಿ ಮನುಕುಮಾರ್ ಎಂಬುವರು ಗ್ರಂಥಿಗೆ ಅಂಗಡಿ ಇಟ್ಟುಕೊಂಡಿದ್ದರು. ಇಂದು ಮಧ್ಯಾಹ್ನ 1.20ರ ಸುಮಾರಿಗೆ ಅಂಗಡಿಯಲ್ಲಿ ಶಾರ್ಟ್ ಸಕ್ರ್ಯೂಟ್ನಿಂದ ಬೆಂಕಿ ಹತ್ತಿಕೊಂಡಿದೆ. ಬೆಂಕಿ ಹತ್ತಿಕೊಂಡ ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದರು.
ಬೆಂಕಿ ನಂದಿಸಿದ ಬಳಿಕ ಅವಶೇಷಗಳ ಹುಡುಕಾಟ ನಡೆಸಿದಾಗ ಅಂಗಡಿ ಮಾಲೀಕ ಮನುಕುಮಾರ್ ಶವ ಪತ್ತೆಯಾಗಿದೆ. ಬೆಂಕಿ ದಿಡೀರ್ ಹತ್ತಿಕೊಂಡ ಪರಿಣಾಮ ಮನುಕುಮಾರ್ ಸಜೀವ ದಹನವಾಗಿದ್ದಾರೆ. ಸ್ಥಳಕ್ಕೆ ಹೆಚ್ಚುವರಿ ಡಿಸಿಪಿ ತೆರಳಿ ಪರಿಶೀಲನೆ ನಡೆಸಿದ್ದಾರೆ.
ಕಳೆದವಾರ ಬೆಂಗಳೂರಿನಲ್ಲಿ ಒಂದು ವಾರ ಲಾಕ್ಡೌನ್ ಮಾಡಲಾಗಿತ್ತು. ಗುರುವಾರ ಬೆಳಿಗ್ಗೆಯಿಂದಲೇ ಲಾಕ್ಡೌನ್ ತೆರವುಗೊಂಡಿತ್ತು. ಆದರೆ, ಚಿಕ್ಕಪೇಟೆಯಲ್ಲಿ ಅಂಗಡಿ ಮುಂಗಟ್ಟು ತೆರೆಯಲು ಬಿಬಿಎಂಪಿ ಅವಕಾಶ ನೀಡಿರಲಿಲ್ಲ. ಕಾರಣ ಗಲ್ಲಿ ಗಲ್ಲಿಗಳಲ್ಲಿ ಕಿಷ್ಕಿಂದೆಯಂತಹ ಪ್ರದೇಶವಾದ ಚಿಕ್ಕಪೇಟೆಯಲ್ಲಿ ಅಂಗಡಿ-ಮುಂಗಟ್ಟುಗಳು ಇರುವ ಕಾರಣ ಜನದಟ್ಟಣೆ ಹೆಚ್ಚಾಗಲಿದೆ ಎಂಬ ಕಾರಣಕ್ಕೆ ಬಿಬಿಎಂಪಿ ಲಾಕ್ಡೌನ್ ತೆರವು ಮಾಡಿರಲಿಲ್ಲ.
ಆದರೆ, ವರ್ತಕರ ಒತ್ತಡಕ್ಕೆ ಮಣಿದ ಬಿಬಿಎಂಪಿ, ಇಂದಿನಿಂದ ಅಂಗಡಿ ಮುಂಗಟ್ಟು ಓಪನ್ ಮಾಡಲು ಅನುಮತಿ ನೀಡಿತ್ತು. ವಾರದ ಬಳಿಕ ಮನುಕುಮಾರ್ ತಮ್ಮ ಗ್ರಂಥಿಗೆ ಅಂಗಡಿ ತೆರೆದಿದ್ದರು. ಈ ವೇಳೆ ಶಾರ್ಟ್ ಸಕ್ರ್ಯೂಟ್ನಿಂದ ಬೆಂಕಿ ಹತ್ತಿಕೊಂಡ ಪರಿಣಾಮ ಈ ಅವಘಡ ನಡೆದಿದೆ.








