ಬೆಳಗಾವಿ: ಲಾಕ್‌ಡೌನ್ ಅವಧಿಯ ಕೇವಲ ಎರಡು ತಿಂಗಳ ಬಾಡಿಗೆ ಕೊಟ್ಟಿಲ್ಲ ಅನ್ನೋ ಕಾರಣಕ್ಕೆ ಬಾಡಿಗೆದಾರರ ಮೇಲೆ ಫೈರಿಂಗ್ ಮಾಡಿದ ಮನೆ ಮಾಲೀಕ ಪೊಲೀಸರ ಅತಿಥಿಯಾದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ನಡೆದಿದೆ.
ಚಿಕ್ಕೋಡಿ ನಗರದ ಬಿ.ಕೆ.ಕಾಲೇಜ್ ಬಳಿಯ ವಿದ್ಯಾಗಿರಿ ನಗರದಲ್ಲಿ ಈ ಘಟನೆ ನಡೆದಿದ್ದು, ಡಬಲ್ ಬ್ಯಾರಲ್ ಬಂದೂಕಿನಿಂದ ಗಾಳಿಯಲ್ಲಿ ಗುಂಡು ಹಾರಿಸಿದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪೊಲೀಸರು ಮನೆ ಮಾಲೀಕ ನೂರ್ ಅಹಮದ್‌ನನ್ನು ವಶಕ್ಕೆ ಪಡೆದಿದ್ದಾರೆ.
ಕಳೆದ 8 ತಿಂಗಳಿನಿಂದ ನೂರ್ ಮಹಮ್ಮದ್‌ನ ಮನೆಯಲ್ಲಿ ಶ್ರೀಮಂತ ದೀಕ್ಷಿತ್ ಕುಟುಂಬಸ್ಥರು ಬಾಡಿಗೆಗೆ ಇದ್ದರು. ಲಾಕ್‌ಡೌನ್ ಹಿನ್ನೆಲೆ ಎರಡು ತಿಂಗಳ ಬಾಡಿಗೆ ಹಣ ನೀಡಲು ತಡವಾಗಿತ್ತು. ಇದರಿಂದ ಕೋಪಗೊಂಡಿದ್ದ ನೂರ್ ಅಹಮದ್, ಅಡ್ವಾನ್ಸ್ ನೀಡಿದ್ದ 10 ಸಾವಿರ ರೂ. ಹಣದಲ್ಲೇ ಬಾಡಿಗೆ ಮುರಿದುಕೊಂಡಿದ್ದ. ಉಳಿದ ಎರಡೂವರೆ ಸಾವಿರ ಬಾಡಿಗೆ ಹಣ ಕೊಟ್ಟು ಮನೆ ಖಾಲಿ ಮಾಡುವಂತೆ ಧಮ್ಕಿ ಹಾಕಿದ್ದಾನೆ ಎಂದು ಬಾಡಿಗೆದಾರರು ಆರೋಪಿಸಿದ್ದಾರೆ.
ಮುಂದಿನ ತಿಂಗಳು ಬಾಡಿಗೆ ಕೊಡುತ್ತೇನೆ ಅಂದಿದ್ದಕ್ಕೆ ನೂರ್ ಮಹಮ್ಮದ ಬೆದರಿಕೆ ಹಾಕಿದ್ದನಂತೆ. ಅಷ್ಟೇ ಅಲ್ಲದೆ ಮನೆಯ ಮುಂಭಾಗದಲ್ಲಿ ನಿಂತು ಡಬಲ್ ಬ್ಯಾರಲ್ ಗನ್‌ನಿಂದ ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ. ಅದೃಷ್ಟವಶಾತ್ ಗುಂಡು ಮನೆಯ ಛಾವಣಿಗೆ ತಾಗಿದೆ.
ಘಟನೆ ಬಳಿಕ ಶ್ರೀಮಂತ ದೀಕ್ಷಿತ್ ಕುಟುಂಬಸ್ಥರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಚಿಕ್ಕೋಡಿ ಪೊಲೀಸರು ನೂರ್ ಅಹಮ್ಮದ್‌ನನ್ನ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.








