ವಿಡಿಯೋ ಕಾನ್ಫರೆನ್ಸ್ ಮೂಲಕ ದೇಶದಲ್ಲಿ ಮೊದಲ ವಿಚ್ಛೇದನ
ಹೊಸದಿಲ್ಲಿ, ಜೂನ್ 17: ವಿಡಿಯೋ ಕಾನ್ಫರೆನ್ಸ್ ಮೂಲಕ ದೆಹಲಿ ಮೂಲದ ದಂಪತಿಗಳು ವರ್ಚುಯಲ್ ವಿಚ್ಛೇದನ ಪಡೆದುಕೊಂಡಿದ್ದಾರೆ. ಇದು ದೇಶದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಪಡೆದ ಮೊದಲ ವಿಚ್ಛೇದನವಾಗಿದೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ನ್ಯಾಯಾಲಯಗಳಲ್ಲಿ ವಿಚಾರಣೆ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯುತ್ತಿದ್ದು, ಜೂನ್ 12ರಂದು ದೆಹಲಿ ಮೂಲದ ದಂಪತಿಗಳ ವಿಚ್ಛೇದನ ಡಿಜಿಜಲ್ ಮೂಲಕ ಆಗಿದೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ಮನೆಯಿಂದ ಗಂಡ-ಹೆಂಡತಿ ಇಬ್ಬರೂ ತಮ್ಮ ವಿಚ್ಛೇದನದ ವಿಚಾರಣೆಯಲ್ಲಿ ಭಾಗಿಯಾಗಿದ್ದರು. ಉಭಯ ಕಡೆಯ ವಕೀಲರು ಕೂಡ ತಮ್ಮ ತಮ್ಮ ಕಚೇರಿಯಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ವಾದ ಮಂಡಿಸಿದರು. ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶ ದೀಪಕ್ ಗರ್ಗ್ ವಿಡಿಯೋ ಕಾನ್ಫರೆನ್ಸ್ ನಲ್ಲೇ ವಿಚಾರಣೆ ನಡೆಸಿ ವಿಚ್ಛೇದನಕ್ಕೆ ಒಪ್ಪಿಗೆ ಸೂಚಿಸಿದರು. ಸ್ವಇಚ್ಛೆಯ ಮೇರೆಗೆ ಇಬ್ಬರೂ ಅರ್ಜಿ ಸಲ್ಲಿಸಿದ್ದರಿಂದ ವಿಚ್ಛೇದನ ನೀಡಲಾಗಿದೆ ಎಂದು ನ್ಯಾಯಾಧೀಶರು ಹೇಳಿದ್ದಾರೆ.

ದೆಹಲಿ ಮೂಲದ ಈ ದಂಪತಿಗಳು 2017ರಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದು, 2018 ರಲ್ಲಿ ಬೇರೆಯಾಗಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು.
ಈ ಹಿಂದೆ ತೆಲಂಗಾಣದ ಕೌಟುಂಬಿಕ ನ್ಯಾಯಾಲಯವೊಂದು ಕಳೆದ ವರ್ಷ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ದಂಪತಿಗಳಿಗೆ ಭಾಗಶಃ ಆನ್‌ಲೈನ್ ಮೂಲಕ ವಿಚ್ಛೇದನ ನೀಡಿತ್ತು. ಪತ್ನಿ ಅಮೆರಿಕದಲ್ಲಿದ್ದ ಕಾರಣ ವಿಚ್ಛೇದನದ ವಿಚಾರಣೆ ವೇಳೆ ಅವರು ಅಮೆರಿಕದದಿಂದ ಸ್ಕೈಪ್ ತಂತ್ರಜ್ಞಾನದ ಮೂಲಕ ಭಾಗವಹಿಸಿದ್ದರು.








