ಬೆಂಗಳೂರು: ಬೆಳಗಾವಿಯಲ್ಲಿ ಲಾಠಿಚಾರ್ಜ್, ಚಿತ್ರದುರ್ಗದಲ್ಲಿ ಕಲ್ಲುತೂರಾಟ, ಯಾದಗಿರಿಯಲ್ಲಿ ಬ್ಯಾಲೆಟ್ ಪೇಪರ್ ಅದಲು ಬದಲು ಸೇರಿದಂತೆ ಘರ್ಷಣೆ, ಮತದಾನ ಬಹಿಷ್ಕಾರ, ಗಲಾಟೆಯ ನಡುವೆಯೂ ರಾಜ್ಯಾದ್ಯಂತ ಗ್ರಾಮ ಪಂಚಾಯಿತಿ ಚುನಾವಣೆಯ ಮೊದಲ ಹಂತದ ಮತದಾನ ಮುಕ್ತಾಯಗೊಂಡಿದೆ.
ಹೆಮ್ಮಾರಿ ಕೊರೊನಾ ಭೀತಿಯ ನಡುವೆಯೂ ರಾಜ್ಯದ 117 ತಾಲೂಕುಗಳಲ್ಲಿ ಗ್ರಾಮ ಪಂಚಾಯತಿಗಳಿಗೆ ಮೊದಲ ಹಂತದ ಚುನಾವಣೆ ಅಂತ್ಯಗೊಂಡಿದೆ.
ಕೊರೊನಾ ಭೀತಿಯಿಂದಾಗಿ ಬೆಳಗ್ಗೆ ಮಂದಗತಿಯಲ್ಲಿ ಆರಂಭವಾದ ಮತದಾನ, ಮಧ್ಯಾಹ್ನದ ಹೊತ್ತಿಗೆ ಚುರುಕು ಪಡೆದು, ಸಂಜೆ ಹೊತ್ತಿಗೆ ಬಿರುದು ಪಡೆಯಿತು. ಕಲಬುರಗಿಯ ಕಮಲಾಪುರದಲ್ಲಿ ಮತಚಿಹ್ನೆ ಬದಲಾದ ಹಿನ್ನೆಲೆಲೆ ಕೆಲಕಾಲ ಮತದಾನ ಸ್ಥಗಿತಗೊಂಡಿತು. ರಾಯಚೂರಿನ ಸಿರವಾರದ ಗಣದಿನ್ನಿಯಲ್ಲಿ ಮತಪತ್ರದಲ್ಲಿ ದೋಷ ಉಂಟಾಗಿ ಕೆಲ ಕಾಲ ಮತದಾನ ಸ್ಥಗಿತಗೊಂಡಿತ್ತು.
ರಾಯಚೂರಿನ ತುಪ್ಪದೂರು ಹಾಗೂ ಗಣದಿನ್ನಿಯಲ್ಲೂ ಮತದಾನ ಸ್ಥಗಿತಗೊಂಡಿತು. ಯಾದಗಿರಿಯ ಶಹಾಪುರದ ವನದುರ್ಗದಲ್ಲಿ ಎರಡು ಮತಗಟ್ಟೆ ಕೇಂದ್ರದಲ್ಲಿ ಬ್ಯಾಲೆಟ್ ಪೇಪರ್ ಅದಲು-ಬದಲು ಆದ ಪರಿಣಾಮ ಚುನಾವಣೆಯನ್ನು ಗ್ರಾಮಸ್ಥರು ಬಹಿಷ್ಕರಿಸಿದರು. ದಾವಣಗೆರೆಯಲ್ಲಿ ಮತಗಟ್ಟೆ ಬಳಿ ಎರಡು ಬಣಗಳ ಮಧ್ಯೆ ವಾಗ್ವಾದ ನಡೆಯಿತು.
ಚಿತ್ರದುರ್ಗ ತಾಲ್ಲೂಕಿನ ಭರಮಸಾಗರ ಗ್ರಾಮದ ಆಜಾದ್ ನಗರದಲ್ಲಿ ಎರಡು ಗುಂಪುಗಳ ನಡುವೆ ಕಲ್ಲು ತೂರಾಟ ನಡೆದಿದೆ. ಕಲ್ಲು ತೂರಾಟ, ಮಚ್ಚಿನ ದಾಳಿಯಿಂದ 4ಕ್ಕೂ ಹೆಚ್ಚು ಜನರಿಗೆ ಗಾಯಗೊಂಡಿದ್ದಾರೆ. ಮತಗಟ್ಟೆ ಬಳಿ ಕಲ್ಲು ತೂರಿ ಎರಡು ಗುಂಪುಗಳ ಮಾರಾಮಾರಿ ನಡೆಯಿತು. ತಮ್ಮ ಕಡೆಯವರನ್ನು ಮತಗಟ್ಟೆಗೆ ಕರೆಸಿಕೊಂಡು ಮತ ಚಲಾಯಿಸುತ್ತಿದ್ದಾರೆಂಬ ಕಾರಣಕ್ಕೆ ಕಲ್ಲು ತೂರಾಟ ನಡೆದು ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿತ್ತು. ಸ್ಥಳಕ್ಕೆ ಭರಮಸಾಗರ ಪೆÇಲೀಸರು, ಎಸ್ಪಿ ರಾಧಿಕಾ ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸುವ ಪ್ರಯತ್ನ ನಡೆಸಿದರು.
ಗೌಪ್ಯ ಮತದಾನ ನಿಯಮವನ್ನು ಗಾಳಿಗೆ ತೂರಿ ಕಲಬುರಗಿ ತಾಲೂಕಿನ ವ್ಯಕ್ತಿಯೊಬ್ಬರು ಮತಪತ್ರದ ಫೋಟೋ ತೆಗೆದು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾನೆ.
ಕೊರೊನಾ ಮುನ್ನೆಚ್ಚರಿಕೆ ನಡುವೆಯೂ ಸಾಮಾಜಿಕ ಅಂತರ, ಮಾಸ್ಕ್ ಮರೆತು ಮತದಾನ ನಡೆಸಿದ ಘಟನೆಗಳು ವರದಿಯಾಗಿವೆ. ಇನ್ನೊಂದೆಡೆ, ಮತದಾನದ ದಿನವೇ ಅಭ್ಯರ್ಥಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಧಾರವಾಡ ಜಿಲ್ಲೆಯಲ್ಲಿ ನಡೆದಿದೆ. ಗರಗ ಗ್ರಾಮ ಪಂಚಾಯಿತಿ ಅಭ್ಯರ್ಥಿ ದಾಮೋದರ ಯಲಿಗಾರ(25) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಒಟ್ಟಾರೆ, ಗಲಾಟೆ, ಗೊಂದಲದ ನಡುವೆಯೇ ಹಳ್ಳಿಫೈಟ್‍ನ ಮೊದಲ ಅಂಕ ಮುಗಿದಿದ್ದು, ಡಿ.27ರಂದು 2ನೇ ಹಂತದ ಮತದಾನ ನಡೆಯಿತು. ಡಿಸೆಂಬರ್ 27ರಂದು 109 ತಾಲೂಕುಗಳಲ್ಲಿ 2709 ಗ್ರಾಮ ಪಂಚಾಯಿತಿಗಳಿಗೆ ಎರಡನೇ ಹಂತದ ಮತದಾನ ನಡೆಯಲಿದೆ. 3697 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದರೆ, 1 ಲಕ್ಷದ 5 ಸಾವಿರದ 431 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಡಿಸೆಂಬರ್ 30ರಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಏಕಕಾಲಕ್ಕೆ ಮತ ಎಣಿಕೆ ನಡೆಯಲಿದೆ ಎಂದು ರಾಜ್ಯ ಚುನಾವಣಾ ಆಯೋಗ ತಿಳಿಸಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel