ಐಪಿಎಲ್ ನಲ್ಲಿ ಮಿಂಚು ಹರಿಸುತ್ತಿರುವ ಯುವ ಪ್ರತಿಭೆಗಳು…ಇವ್ರೇ…!
ಐಪಿಎಲ್.. ಕೇವಲ ದುಡ್ಡಿನ ಆಟವಲ್ಲ. ಇಲ್ಲಿ ದುಡ್ಡಿನ ಜೊತೆಗೆ ಪ್ರತಿಭೆಗೂ ಬೆಲೆ ಇದೆ.
ಐಪಿಎಲ್ ಮೂಲಕ ಅನೇಕ ಪ್ರತಿಭೆಗಳು ಬೆಳಕಿಗೆ ಬಂದಿವೆ.
ಹಾಗೇ ಐಪಿಎಲ್ ಮೂಲಕ ತಮ್ಮ ಆಟದ ಖದರ್ ಅನ್ನು ಹೆಚ್ಚಿಸಿಕೊಂಡಂತಹ ಆಟಗಾರರು ಇದ್ದಾರೆ.
ಯುವ ಕ್ರಿಕೆಟಿಗರ ಪ್ರತಿಭೆ ಅನಾವರಣಗೊಳಿಸಲು ಇಂಡಿಯನ್ ಪ್ರೀಮಿಯರ್ ಲೀಗ್ ಸೂಕ್ತ ವೇದಿಕೆ ಎಂಬುದರಲ್ಲಿ ಎರಡು ಮಾತಿಲ್ಲ.
ಅದ್ರಲ್ಲೂ ಭಾರತದ ಅನೇಕ ಕ್ರಿಕೆಟಿಗರು ಐಪಿಎಲ್ ಮೂಲಕ ಬೆಳಕಿಗೆ ಬಂದು ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಮಿಂಚು ಹರಿಸುತ್ತಿದ್ದಾರೆ.
ಪ್ರತಿ ಐಪಿಎಲ್ ನಲ್ಲೂ ಕನಿಷ್ಠ ಐದಕ್ಕಿಂತ ಹೆಚ್ಚು ಆಟಗಾರರು ಗಮನ ಸೆಳೆಯುತ್ತಿದ್ದಾರೆ. ಅದಕ್ಕೆ ಈ ಬಾರಿಯ ಐಪಿಎಲ್ ಕೂಡ ಹೊರತಲ್ಲ.
ಚೊಚ್ಚಲ ಐಪಿಎಲ್ ನಲ್ಲಿ ಮಿಂಚು ಹರಿಸಿದ್ದ ಟಾಪ್ -5 ಆಟಗಾರರ ಪಟ್ಟಿ ಇಲ್ಲಿದೆ.
2020ರ ಐಪಿಎಲ್ ರೋಚಕವಾಗಿ ಸಾಗುತ್ತಿದೆ. ಐಪಿಎಲ್ ನಲ್ಲಿ ಸಂಘಟಿತ ಆಟದ ಜೊತೆಗೆ ಏಕಾಂಗಿ ಹೋರಾಟ ನಡೆಸಿ ತಂಡಕ್ಕೆ ಗೆಲುವು ದಕ್ಕಿಸಿಕೊಟ್ಟಂತಹ ಆಟಗಾರರು ಇದ್ದಾರೆ.
ಪ್ರಿಯಮ್ ಗರ್ಗ್..
ಭಾರತ 19 ವಯೋಮಿತಿ ವಿಶ್ವಕಪ್ ತಂಡದ ನಾಯಕ.
ಸದ್ಯದ ಐಪಿಎಲ್ ನಲ್ಲಿ ಪ್ರಿಯಮ್ ಗರ್ಗ್ ಅವರು ಸನ್ ರೈಸರ್ಸ್ ಹೈದ್ರಬಾದ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.
ಸನ್ ರೈಸರ್ಸ್ ಹೈದ್ರಬಾದ್ ತಂಡ ಪ್ರಿಯಮ್ ಗರ್ಗ್ ಅವರನ್ನು 1.9 ಕೋಟಿ ರೂಪಾಯಿ ನೀಡಿ ಖರೀದಿ ಮಾಡಿತ್ತು.
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಪ್ರಿಯಮ್ ಗರ್ಗ್ ಅವರು ಆಕರ್ಷಕ ಹಾಗೂ ಅಜೇಯ 51 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದ್ದರು.
ಇನ್ನುಳಿದ ಪಂದ್ಯಗಳಲ್ಲಿ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಿಲ್ಲ.
ಆದ್ರೂ ತನ್ನ ಪ್ರತಿಭೆ, ಸಾಮಥ್ರ್ಯ ಏನು ಎಂಬುದನ್ನು ಪ್ರಿಯಮ್ ಗರ್ಗ್ ತೋರಿಸಿಕೊಟ್ಟಿದ್ದಾರೆ.
ರವಿ ಬಿಸ್ನೋಯ್
ರವಿ ಬಿಸ್ನೋಯ್ ಕೂಡ ಭಾರತ 19 ವಯೋಮಿತಿ ತಂಡದ ಸ್ಪಿನ್ನರ್.
ಐಪಿಎಲ್ ನಲ್ಲಿ ಕಿಂಗ್ಸ್ ಇಲೆವೆನ್ ತಂಡದ ಪರ ಆಡುತ್ತಿದ್ದಾರೆ. ಎಂಟು ಪಂದ್ಯಗಳಲ್ಲಿ ರವಿ ಬಿಸ್ನೋಯ್ ಅವರು ಎಂಟು ವಿಕೆಟ್ ಪಡೆದು ಮಿಂಚು ಹರಿಸಿದ್ದಾರೆ.
ತುಷಾರ್ ದೇಶಪಾಂಡೆ
2008ರಲ್ಲಿ ತುಷಾರ್ ದೇಶಪಾಂಡೆ ಅವರು ಐಪಿಎಲ್ ನಲ್ಲಿ ಬಾಲ್ ಬಾಯ್ ಆಗಿದ್ದರು.
ಮುಂಬೈ ರಣಜಿ ತಂಡದ ಆಟಗಾರ. ಸದ್ಯ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ತುಷಾರ್ ಆಡುತ್ತಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡ 20 ಲಕ್ಷ ರೂಪಾಯಿಗೆ ತುಷಾರ್ ಅವರನ್ನು ಖರೀದಿ ಮಾಡಿತ್ತು.
ರಾಜಸ್ತಾನ ರಾಯಲ್ಸ್ ವಿರುದ್ಧ ಚೊಚ್ಚಲ ಐಪಿಎಲ್ ಪಂದ್ಯವನ್ನಾಡಿದ್ದಾರೆ.
ಮೊದಲ ಪಂದ್ಯದಲ್ಲಿ 2 ವಿಕೆಟ್ ಉರುಳಿಸಿ ತಂಡದ ಗೆಲುವಿನ ರೂವಾರಿಯಾಗಿದ್ದರು.
ತುಷಾರ್ ದೇಶಪಾಂಡೆ ಈ ಬಾರಿಯ ಐಪಿಎಲ್ ನಲ್ಲಿ ಮಿಂಚು ಹರಿಸುತ್ತಿರುವ ಯುವ ವೇಗಿ.
ದೇವದತ್ತ್ ಪಡಿಕ್ಕಲ್.
ದೇಸಿ ಟೂರ್ನಿಯಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿದ್ದಾರೆ ನಮ್ಮ ದೇವದತ್ತ್ ಪಡಿಕ್ಕಲ್. ಕೇರಳ ಮೂಲವಾಗಿದ್ರೂ ಕ್ರಿಕೆಟ್ ಆಟವನ್ನು ಕಲಿತಿರುವುದು ಕರ್ನಾಟಕದಲ್ಲಿ.
ಕರ್ನಾಟಕ ರಣಜಿ ತಂಡದ ಆಟಗಾರನಾಗಿರುವ ದೇವದತ್ತ್ ಪಡಿಕ್ಕಲ್ ಅವರು ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ ಪರ ಆಡುತ್ತಿದ್ದಾರೆ.
ಈ ಬಾರಿಯ ಐಪಿಎಲ್ ನಲ್ಲಿ ಅದ್ಭುತ ಬ್ಯಾಟಿಂಗ್ ಮೂಲಕ ಗಮನ ಸೆಳೆದಿರುವ ಆಟಗಾರ. ಆಡಿರುವ 9 ಪಂದ್ಯಗಳಲ್ಲಿ ದೇವದತ್ತ್ ಪಡಿಕ್ಕಲ್ ಅವರು 296 ರನ್ ದಾಖಲಿಸಿದ್ದಾರೆ.
ಕಾರ್ತಿಕ್ ತ್ಯಾಗಿ
ಕಾರ್ತಿಕ್ ತ್ಯಾಗಿ ಕೂಡ ಯುವ ಬೌಲರ್. ರಾಜಸ್ತಾನ ರಾಯಲ್ಸ್ ತಂಡದ ಪರ ಆಡುತ್ತಿದ್ದಾರೆ.
ಉತ್ತರ ಪ್ರದೇಶದ ಕಾರ್ತಿಕ್ ತ್ಯಾಗಿ ಅವರನ್ನು ರಾಜಸ್ತಾನ ರಾಯಲ್ಸ್ 1.30 ಕೋಟಿ ರೂಪಾಯಿಗೆ ಖರೀದಿ ಮಾಡಿತ್ತು.
19ರ ಹರೆಯದ ಕಾರ್ತಿಕ್ ತ್ಯಾಗಿ ಕೂಡ 140 ಕಿಲೋ ಮೀಟರ್ ವೇಗದಲ್ಲಿ ಬೌಲಿಂಗ್ ಮಾಡುತ್ತಿದ್ದಾರೆ. ಸದ್ಯ ಐದು ವಿಕೆಟ್ ಕೂಡ ಉರುಳಿಸಿದ್ದಾರೆ.
ಇನ್ನುಳಿದಂತೆ ಕೆಕೆಆರ್ ತಂಡದ ವೇಗಿ ಕಮಲೇಶ್ ನಾಗರ್ಕೊಟಿ ಕೂಡ ಮಿಂಚು ಹರಿಸುತ್ತಿದ್ದಾರೆ.
ಒಟ್ಟಿನಲ್ಲಿ ಈ ಬಾರಿಯ ಐಪಿಎಲ್ ನಲ್ಲಿ ಯುವ ಪ್ರತಿಭೆಗಳು ಬೆಳಕಿಗೆ ಬಂದಿವೆ.
ಈ ಆಟಗಾರರು ಸ್ಥಿರ ಪ್ರದರ್ಶನ ನೀಡಿದ್ರೆ ಮುಂದೊಂದು ದಿನ ಟೀಮ್ ಇಂಡಿಯಾದಲ್ಲೂ ಈ ಆಟಗಾರರ ಆಟವನ್ನು ನೋಡಬಹುದಾಗಿದೆ.