ಜುಲೈ 29 ರಂದು ಭಾರತ ಪ್ರವೇಶಿಸಲಿರುವ ಐದು ರಾಫೆಲ್ ಜೆಟ್ಗಳು
ಹೊಸದಿಲ್ಲಿ, ಜುಲೈ 21: ಐದು ರಾಫೆಲ್ ಜೆಟ್ಗಳ ಮೊದಲ ಬ್ಯಾಚ್ ಜುಲೈ 29 ರಂದು ಭಾರತೀಯ ಸೇನೆಯನ್ನು ಸೇರಿಕೊಳ್ಳಲಿದೆ ಎಂದು ಹೇಳಲಾಗಿದೆ. ಗೇಮ್ ಚೇಂಜರ್ ವಿಮಾನಗಳು ಜುಲೈ 29 ರಂದು ಹರಿಯಾಣದ ವಾಯುಪಡೆಯ ಸ್ಟೇಷನ್ ಅಂಬಾಲಾ ಏರ್ಫೋರ್ಸ್ ಸ್ಟೇಶನ್ನಲ್ಲಿ ಬಂದಿಳಿಯಲಿವೆ ಎಂದು ಭಾರತೀಯ ವಾಯುಪಡೆ ತಿಳಿಸಿದೆ.
ಹರ್ಯಾಣದ ಅಂಬಾಲ ಹಾಗೂ ಪಶ್ಚಿಮ ಬಂಗಾಳದ ಹಶಿಮರ ಏರ್ಫೋರ್ಸ್ ಸ್ಟೇಶನ್ಗಳಲ್ಲಿ ನೂತನ ರಾಫೆಲ್ ಯುದ್ಧವಿಮಾನಗಳ ಪ್ರಾಯೋಗಿಕ ಪರೀಕ್ಷೆ ನಡೆಯಲಿದೆ.
ಐಎಎಫ್ ಏರ್ಕ್ರ್ಯೂ ಮತ್ತು ನೆಲದ ಸಿಬ್ಬಂದಿ ವಿಮಾನದ ಬಗ್ಗೆ ಅದರ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ವ್ಯವಸ್ಥೆಯನ್ನು ಒಳಗೊಂಡಂತೆ ಸಮಗ್ರ ತರಬೇತಿಯನ್ನು ಪಡೆದಿದ್ದಾರೆ ಮತ್ತು ಈಗ ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಫ್ರಾನ್ಸ್ನಿಂದ ಭಾರತಕ್ಕೆ ಈ ಯುದ್ಧವಿಮಾನಗಳನ್ನು ಭಾರತೀಯ ವಾಯುಪಡೆ ಪೈಲೈಟ್ಗಳು ವಾಯುಮಾರ್ಗದ ಮೂಲಕ ತರಲಿದ್ದಾರೆ ಎಂದು ಐಎಎಫ್ ತಿಳಿಸಿದೆ.
ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ಎರಡು ಸ್ಕ್ವಾಡ್ರನ್ಗಳನ್ನು ಒಳಗೊಂಡ ಒಟ್ಟು 36 ಜೆಟ್ಗಳು ಭಾರತೀಯ ವಾಯುಪಡೆಯ (ಐಎಎಫ್) ಭಾಗವಾಗಲಿವೆ. ಮೊದಲ ಸ್ಕ್ವಾಡ್ರನ್ ಹರ್ಯಾಣದ ಅಂಬಾಲಾದಿಂದ ಕಾರ್ಯನಿರ್ವಹಿಸಲಿದ್ದರೆ, ಇನ್ನೊಂದು ಚೀನಾದ ಬೆದರಿಕೆಯನ್ನು ಎದುರಿಸಲು ಪಶ್ಚಿಮ ಬಂಗಾಳದ ಹಶಿಮರಾದಲ್ಲಿ ಕಾರ್ಯನಿರ್ವಹಿಸಲಿದೆ.
ರಾಫೆಲ್ ಫೈಟರ್ ಜೆಟ್ ಪ್ರಬಲ ಅತ್ಯಾಧುನಿಕ ಕ್ಷಿಪಣಿಗಳಿಂದ ಶಸ್ತ್ರಸಜ್ಜಿತವಾಗಿದ್ದು, ಇದು ವಾಯುದಾಳಿ ಸಾಮರ್ಥ್ಯ ಮತ್ತು ಭಾರತೀಯ ವಾಯುಪಡೆಯ ವಾಯು ಪ್ರಾಬಲ್ಯವನ್ನು ಹೆಚ್ಚಿಸುತ್ತದೆ.
2016ರಲ್ಲಿ ಕೇಂದ್ರ ಸರ್ಕಾರವು ಭಾರತಕ್ಕೆ 59,000 ಕೋಟಿ ರೂ. ವೆಚ್ಚದ 36 ವಿಮಾನಗಳನ್ನು ಫ್ರೆಂಚ್ ವಿಮಾನ ತಯಾರಕ ಡಸಾಲ್ಟ್ ಏವಿಯೇಷನ್ನಿಂದ ಖರೀದಿಸುವ ಒಪ್ಪಂದ ಮಾಡಿಕೊಂಡಿತ್ತು.
ಈ ಒಪ್ಪಂದವು ಭಾರತದಲ್ಲಿ ರಾಜಕೀಯ ಬಿರುಗಾಳಿಯನ್ನು ಉಂಟುಮಾಡಿತ್ತು ಮತ್ತು ಪ್ರತಿಪಕ್ಷಗಳು ಯುದ್ಧವಿಮಾನ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದ್ದವು.