ಬೆಂಗಳೂರು: ಕೊರೊನಾ ಸೋಂಕು ಹರಡುವುದನ್ನು ತಡೆಯಲು ದೇಶದಾದ್ಯಂತ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಮನೆಯಿಂದಲೇ ಕೆಲಸ ಮಾಡಿದವರಿಗೆ ಪೂರ್ತಿ ವೇತನ ನೀಡಬೇಕು. 15 ಸಾವಿರಕ್ಕಿಂತ ಒಳಗಿನ ವೇತನದಾರರಿಗೆ ಕೆಲಸ ಮಾಡದೆ ಇದ್ದರೂ ಪೂರ್ತಿ ವೇತನ ಪಾವತಿಸಬೇಕೆಂದು ಎಫ್ಕೆಸಿಸಿಐ ಸೂಚನೆ ನೀಡಿದೆ.
ರಾಜ್ಯದಲ್ಲಿ 6.5 ಲಕ್ಷ ಕೈಗಾರಿಕೆಗಳಿವೆ. 65 ಲಕ್ಷ ಮಂದಿ ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದಾರೆ. ತಿಂಗಳಿಗೆ 6500 ಕೋಟಿ ರೂ. ವೇತನ ಪಾವತಿ ಮಾಡಲಾಗುತ್ತಿದೆ. ಲಾಕ್ ಡೌನ್ ಸಂದರ್ಭದಲ್ಲಿ ಉತ್ಪಾದನೆ ಇಲ್ಲದೆ ಉದ್ದಿಮೆದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪೂರ್ತಿ ವೇತನ ಪಾವತಿ ಮಾಡಲಾಗದೆ ಸಮಸ್ಯೆಗೆ ಸಿಲುಕಿದ್ದಾರೆ. ಬಹಳಷ್ಟು ಮಂದಿ ಇದರ ಬಗ್ಗೆ ಸ್ಪಷ್ಟೀಕರಣ ನೀಡುವಂತೆ ಎಫ್ಕೆಸಿಸಿಐಗೆ ಮನವಿ ಮಾಡಿದ್ದರು. ಈ ಹಿನ್ನಲೆ ಎಫ್ ಕೆಸಿಸಿಐ ಅಧ್ಯಕ್ಷ ಸಿ.ಆರ್.ಜನಾರ್ದನ್ ಎಲ್ಲರ ಜತೆ ಚರ್ಚಿಸಿ ಸ್ಪಷ್ಟ ನಿಲುವು ತೆಗೆದುಕೊಂಡಿದ್ದಾರೆ. 15 ಸಾವಿರ ರೂ.ಗಿಂತ ಒಳಗೆ ವೇತನ ತೆಗೆದುಕೊಳ್ಳುತ್ತಿರುವವರಿಗೆ ಕೆಲಸ ಮಾಡದೆ ಇದ್ದರೂ ಪೂರ್ತಿ ವೇತನ ಪಾವತಿ ಮಾಡಬೇಕು. ಈ ವೇತನದ ಪ್ಯಾಕೇಜ್ನಲ್ಲಿ ಇರುವವರು ಜೀವನ ನಡೆಸುವವರು ಸಾಕಷ್ಟು ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿರುತ್ತಾರೆ. ಅವರಿಗೆ ವೇತನ ಕಡಿತ ಮಾಡುವುದು ಸೂಕ್ತವಲ್ಲ ಎಂದು ಸಿ.ಆರ್.ಜನಾರ್ದನ್ ಹೇಳಿದ್ದಾರೆ .
ಇದಲ್ಲದೆ 15 ರಿಂದ 50 ಸಾವಿರ ವೇತನ ಪಡೆಯುವ ವರ್ಗದವರು ಮನೆಯಿಂದ ಕೆಲಸ ಮಾಡಿದ್ದರೆ ಯಾವುದೇ ಕಡಿತ ಇಲ್ಲದೆ ಪೂರ್ತಿ ವೇತನ ಪಾವತಿ ಮಾಡಬೇಕು. ಲಾಕ್ ಡೌನ್ ವೇಳೆ ಯಾವುದೇ ಕೆಲಸ ಮಾಡದೆ ರಜೆ ಹಾಕಿ ಮನೆಯಲ್ಲಿದ್ದರೆ ಅವರಿಗೆ ವೇತನದಲ್ಲಿ ಶೇ.50ರಷ್ಟನ್ನು ಪಾವತಿ ಮಾಡಬೇಕು ಎಂದು ಎಫ್ಕೆಸಿಸಿಐ ಸ್ಪಷ್ಟನೆ ನೀಡಿದೆ.








