ನವದೆಹಲಿ : ಏಪ್ರಿಲ್ 14 ನಂತ್ರ ದೇಶದಲ್ಲಿ ಮತ್ತೆ ವಿಮಾನಗಳು ಹಾರಾಲಿವೆ. ಸದ್ಯ ಏಪ್ರಿಲ್ 14ರವರೆಗೆ ದೇಶಾದ್ಯಂತ ಲಾಕ್‌ಡೌನ್ ಘೋಷಿಸಲಾಗಿದೆ. ಈ ಅವಧಿಯನ್ನು ಮುಂದುವರಿಸಲಾಗುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟ ಭರವಸೆ ನೀಡಿದೆ. ಈ ಕಾರಣದಿಂದಾಗಿ ವಿಮಾನ ಯಾನ ಸಂಸ್ಥೆಗಳು ಬುಕಿಂಗ್ ಆರಂಭಿಸಿವೆ. ಈ ಬಗ್ಗೆ ಪ್ರಯಾಣಿಕರು ಸಂಸ್ಥೆಯಿಂದ ಅಗತ್ಯ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.
ಸ್ಪೈಸ್ ಜೆಟ್, ಇಂಡಿಗೋ, ಗೋ ಏರ್ ಮೊದಲಾದ ಸಂಸ್ಥೆಗಳು ಏಪ್ರಿಲ್ 15 ರ ಬಳಿಕ ದೇಶೀಯ ಯಾನಕ್ಕೆ ಬುಕಿಂಗ್ ಲಭ್ಯವಿದೆ ಎಂದು ಘೋಷಿಸಿವೆ. ಆದರೆ, ಈ ಕುರಿತು ಅಧಿಕೃತ ಪ್ರಕಟನೆಯನ್ನು ಈವರೆಗೂ ಹೊರಡಿಸಿಲ್ಲ.
ರೈಲ್ವೆ ಮುಂಗಡ ಕಾದಿರಿಸುವಿಕೆ ನಿಲ್ಲಿಸಿಲ್ಲ!
ಟಿಕೆಟ್ ಮುಂಗಡ ಕಾದಿರಿಸುವಿಕೆಯನ್ನು ರದ್ದು ಪಡಿಸಿಲ್ಲ ಎಂದು ಭಾರತೀಯ ರೈಲ್ವೆ ತಿಳಿಸಿದೆ. 120 ದಿನ ಮುಂಚಿತವಾಗಿ ಟಿಕೆಟ್ ಕಾದಿರಿಸುವ ವ್ಯವಸ್ಥೆ ಹಿಂದಿನಂತೆ ಈಗಲೂ ಮುಂದುವರಿದಿದೆ. ಲಾಕ್‌ಡೌನ್ ಅವಧಿ ಹೊರತುಪಡಿಸಿ ಉಳಿದ ಅವಧಿಗೆ ಈಗಲೂ ಕಾದಿರಿಸಬಹುದು ಎಂದು ರೈಲ್ವೆ ಸಚಿವಾಲಯ ಸ್ಪಷ್ಟಪಡಿಸಿದೆ.








