ಕಲಬುರಗಿ: ಜಿಲ್ಲೆಯ ಚಿಂಚೋಳಿ ತಾಲೂಕಿನ ನಾಗರಾಳ ಜಲಾಶಯದಿಂದ ಭಾರಿ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಿದ ಪರಿಣಾಮ ಸಂಗಮೇಶ್ವರ ದೇವಾಲಯದಲ್ಲಿ ಸಿಲುಕಿದ್ದ ಇಬ್ಬರನ್ನು ರಕ್ಷಣೆ ಮಾಡಲಾಗಿದೆ.
ಚಿಂಚೋಳಿ ತಾಲೂಕಿನ ಚಿಮ್ಮನಚೋಡ ಗ್ರಾಮದ ಸಂಗಮೇಶ್ವರ ದೇವಾಲಯದಲ್ಲಿ ತಾಜಲಾಪುರದ ಮಾರುತಿ ಹಡಪದ್, ಚಿಮ್ಮನಚೋಡ ಗ್ರಾಮದ ಚಂದ್ರಪ್ಪ ಭಕ್ತಂಪಲ್ಲಿ ಕಳೆದ ರಾತ್ರಿ ಮಲಗಿದ್ದರು. ಕಳೆದ ರಾತ್ರಿ ನಾಗರಾಳ ಡ್ಯಾಂನಿಂದ ಭಾರಿ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಲಾಗಿತ್ತು. ಹೀಗಾಗಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚುತ್ತಿದ್ದಂತೆ ನದಿ ಪಕ್ಕದಲ್ಲೇ ಇರುವ ಸಂಗಮೇಶ್ವರ ದೇವಾಲಯಕ್ಕೂ ನೀರು ನುಗ್ಗಿದೆ. ಕೊನೆಗೆ ಅಲ್ಲಿಂದ ಬಚಾವಾಗಲು ದೇವಸ್ಥಾನದ ಸಮುದಾಯದ ಭವನದಲ್ಲಿ ಆಶ್ರಯ ಪಡೆದಿದ್ದಾರೆ. ಅಲ್ಲಿಗೂ ನೀರು ನುಗ್ಗಿದ ಪರಿಣಾಮ ರಾತ್ರಿ ಇಡೀ ನೀರಿನಲ್ಲೇ ನಿಂತು ಕಾಲ ಕಳೆದಿದ್ದಾರೆ.
ಇಂದು ಬೆಳಿಗ್ಗೆ ಗ್ರಾಮಸ್ಥರಿಗೆ ವಿಷಯ ತಿಳಿದಾಗ ಡ್ಯಾಂನಿಂದ ನೀರು ಬಿಡುವುದನ್ನು ಬಂದ್ ಮಾಡಲಾಗಿದೆ. ನದಿಯಲ್ಲಿ ನೀರಿನ ಮಟ್ಟ ಇಳಿಕೆಯಾಗುತ್ತಿದ್ದಂತೆ ಮಾರುತಿ ಹಾಗೂ ಚಂದ್ರಪ್ಪ ಅವರನ್ನು ಹಗ್ಗದ ಸಹಾಯದಿಂದ ರಕ್ಷಣೆ ಮಾಡಲಾಗಿದೆ.
ಚಿಂಚೋಳಿಯಲ್ಲಿ ಪ್ರವಾಹ ಭೀತಿ..!
ಚಿಂಚೋಳಿ ತಾಲೂಕಿನ ನಾಗರಾಳ ಜಲಾಶಯ ಭರ್ತಿಯಾಗಿದ್ದು, ಭಾರಿ ಪ್ರಮಾಣದಲ್ಲಿ ನದಿಗೆ ನೀರು ಬಿಡಲಾಗಿದೆ. ಹೀಗಾಗಿ ನದಿ ಪಾತ್ರದಲ್ಲಿ ಪ್ರವಾಹ ಭೀತಿ ಎದುರಾಗಿದೆ. ಚಿಮ್ಮನಚೋಡ ಗ್ರಾಮದ 25 ಮನೆಗಳು ಹಾಗೂ ಕನಕಪುರದಲ್ಲಿ 10 ಮನೆಗಳಿಗೆ ನೀರು ನುಗ್ಗಿದೆ.

ಡ್ಯಾಂನ 5 ಗೇಟುಗಳನ್ನು ತೆರೆದು 20 ಸಾವಿರ ಕ್ಯೂಸೆಕ್ಸ್ ನೀರನ್ನು ನದಿಗೆ ಬಿಟ್ಟಿದ್ದರಿಂದ ಪ್ರವಾಹ ಪರಿಸ್ಥಿತಿ ಎದುರಾಗಿದೆ.
ಪ್ರವಾಹದಿಂದಾಗಿ ಚಿಮ್ಮನಚೋಡ, ತಾಜಲಾಪುರ, ಗಾರಂಪಳ್ಳಿ ಹಾಗೂ ಚಂದಾಪುರ ಸೇತುವೆಗಳು ಮುಳುಗಡೆಯಾಗಿವೆ.








