ಕೊಡಗು ಜಿಲ್ಲೆಯಲ್ಲಿ ಮತ್ತೆ ಪ್ರವಾಹದ ಭೀತಿ – ಎಡೆ ಬಿಡದೆ ಸುರಿಯುತ್ತಿರುವ ಮಳೆ
ಕೊಡಗು, ಸೆಪ್ಟೆಂಬರ್21: ಕೊಡಗು ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಎಡೆ ಬಿಡದೆ ಮಳೆ ಸುರಿಯುತ್ತಿದ್ದು, ತಿಂಗಳ ಬಳಿಕ ಮತ್ತೆ ಪ್ರವಾಹದ ಭೀತಿ ಎದುರಾಗಿದೆ. ಶುಕ್ರವಾರ ಸಂಜೆಯಿಂದಲೇ ಧಾರಕಾರವಾಗಿ ಮಳೆ ಸುರಿಯುತ್ತಿದ್ದು ತ್ರಿವೇಣಿ ಸಂಗಮದಲ್ಲಿ ಬಹುತೇಕ ಮುಳುಗಡೆಯಾಗಿದೆ. ತಲಕಾವೇರಿ ಭಾಗಮಂಡಲದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಭಾಗಮಂಡಲ ಬಹುತೇಕ ಮುಳುಗಡೆಯಾಗಿದೆ. ನಾಪೋಕ್ಲು, ಅಯ್ಯಂಗೇರಿ ಮತ್ತು ನೆಲಜಿ ಗ್ರಾಮಗಳ ರಸ್ತೆ ಸಂಪರ್ಕ ಕಡಿತವಾಗಿದೆ.
ರಸ್ತೆಯ ಮೇಲೆ ನಾಲ್ಕು ಅಡಿಯಷ್ಟು ಕಾವೇರಿ ನದಿ ನೀರು ಹರಿಯುತ್ತಿದ್ದು, ವಾಹನಗಳ ಸಂಚಾರ ಸಂಪೂರ್ಣ ಸ್ಥಗಿತವಾಗಿದೆ. ಮಡಿಕೇರಿ ಭಾಗಮಂಡಲ ಸಂಪರ್ಕ ರಸ್ತೆ ಮೇಲೂ ನೀರು ಹರಿಯುತ್ತಿದ್ದು, ಮಡಿಕೇರಿ ಸಂಪರ್ಕ ರಸ್ತೆಯೂ ಸ್ಥಗಿತವಾಗುವ ಸಾಧ್ಯತೆ ಇದೆ. ಮೂರು ದಿನಗಳಿಂದ ಸುರಿಯುತ್ತಿರುವ ಮಳೆಗೆ ಕಾವೇರಿ ನದಿಯಲ್ಲಿ ಒಂದೇ ದಿನಕ್ಕೆ ಬರೋಬ್ಬರಿ 12 ಅಡಿಯಷ್ಟು ನೀರು ಏರಿಕೆಯಾಗಿದೆ. ಮಳೆ ಮುಂದುವರೆದಲ್ಲಿ ಕಾವೇರಿ ನದಿ ಉಕ್ಕಿ ಹರಿಯುವ ಸಾಧ್ಯತೆ ಇದ್ದು, ಕಾವೇರಿ ನದಿ ಪಾತ್ರದ ಜನರು ಪ್ರವಾಹದ ಆತಂಕ ಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಈಗಾಗಲೇ ಭಾಗಮಂಡಲ ಸೇರಿದಂತೆ ಹಲವೆಡೆ ರಸ್ತೆ ಸಂಪರ್ಕಗಳು ಕಡಿತಗೊಂಡಿದ್ದು, ನಾಪೋಕ್ಲು, ಕರಡಿಗೋಡು, ಗುಹ್ಯ, ಕುಂಬಾರಗುಂಡಿ ಸೇರಿದಂತೆ ಹಲವು ಗ್ರಾಮಗಳು ಮತ್ತೆ ಪ್ರವಾಹ ಎದುರಿಸುವ ಸಾಧ್ಯತೆ ಇದೆ.
ಕೊಡಗಿನಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ, ಒಂದು ತಿಂಗಳ ಅವಧಿಯಲ್ಲಿ ಮೂರು ಬಾರಿ ಪ್ರವಾಹದ ಪರಿಸ್ಥಿತಿ ಎದುರಾಗಿದೆ.
ಕೊಡಗು ಜಿಲ್ಲೆಯಲ್ಲಿ ಮತ್ತೆ ಪ್ರವಾಹದ ಭೀತಿ – ಎಡೆ ಬಿಡದೆ ಸುರಿಯುತ್ತಿರುವ ಮಳೆ pic.twitter.com/OELi1XmtrO
— Saaksha TV (@SaakshaTv) September 21, 2020
ಪ್ರಕೃತಿ ವಿಕೋಪಕ್ಕೆ ಸಂಬಂಧಿತ ಯಾವುದೇ ಸಮಸ್ಯೆಗಳಿಗೆ ಸಂಪರ್ಕಿಸಲು ಸಹಾಯವಾಣಿ ಸಂಖ್ಯೆಗೆ ಕರೆ ಮಾಡಲು ಕೋರಲಾಗಿದೆ. ಟೋಲ್ ಫ್ರೀ ಸಂಖ್ಯೆ 24 X7 ಕಂಟ್ರೋಲ್ ರೂ.08272-221077, ವಾಟ್ಸ್‍ಆಪ್ ನಂ.8550001077 ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಕೋರಿದ್ದಾರೆ.








