ಬೆಂಗಳೂರು : ಭಾರಿ ಮಳೆ, ಪ್ರವಾಹದಿಂದಾಗಿ ಉತ್ತರ ಕರ್ನಾಟಕ ತತ್ತರಿಸಿ ಹೋಗಿದ್ದು, ಈ ಕುರಿತು ಪರಿಸ್ಥಿತಿ ವೀಕ್ಷಿಸಲು ಸಿಎಂ ಬಿ.ಎಸ್ ಯಡಿಯೂರಪ್ಪ ಮಂಗಳವಾರ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ.
ಸಿಎಂ ಬಿಎಸ್ ವೈ, ಮಂಗಳವಾರ ಬೆಳಗ್ಗೆ 9 ಗಂಟೆಗೆ ಹೆಚ್ ಎಎಲ್ ನಿಂದ ಬೆಳಗಾವಿಗೆ ಪ್ರಯಾಣ ಬೆಳೆಸಲಿದ್ದಾರೆ. ಬೆಳಗ್ಗೆ 10.30ಕ್ಕೆ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಬೆಳಗಾವಿ, ಧಾರವಾಡ ಜಿಲ್ಲೆಗಳ ಸಚಿವರು, ಶಾಸಕರು, ಜಿಲ್ಲಾಧಿಕಾರಿಗಳ ಜೊತೆ ಮಳೆ ಹಾನಿ ಸಂಬಂಧ ಸಭೆ ನಡೆಸಲಿರುವ ಸಿಎಂ, ಬಳಿಕ 11.15ಕ್ಕೆ ಸೇನಾ ಹೆಲಿಕಾಪ್ಟರ್ ಮೂಲಕ ವೈಮಾನಿಕ ಸಮೀಕ್ಷೆ ಕೈಗೊಳ್ಳಲಿದ್ದಾರೆ. ಬೆಳಗಾವಿ, ವಿಜಯಪುರ, ಬಾಗಲಕೋಟೆ ಜಿಲ್ಲೆಗಳಲ್ಲಿ ಸಮೀಕ್ಷೆ ನಡೆಸಲಿದ್ದಾರೆ.
ನಂತರ ಆಲಮಟ್ಟಿ ಜಲಾಶಯಕ್ಕೆ ಸಿಎಂ ಭೇಟಿ ನೀಡಲಿದ್ದು, ಮಧ್ಯಾಹ್ನ 1 ಗಂಟೆಗೆ ವಿಜಯಪುರ, ಬಾಗಲಕೋಟೆ, ಗದಗ ಜಿಲ್ಲೆಗಳಿಗೆ ಸಂಬಂಧಿಸಿದಂತೆ ಸಚಿವರು, ಶಾಸಕರು, ಜಿಲ್ಲಾಧಿಕಾರಿಗಳ ಜೊತೆ ಮಳೆ ಹಾನಿ ಸಂಬಂಧಿಸಿದಂತೆ ಸಭೆ ನಡೆಸಲಿದ್ದಾರೆ. ಮತ್ತೆ ಮಧ್ಯಾಹ್ನ 2.30ಕ್ಕೆ ವೈಮಾನಿಕ ಸಮೀಕ್ಷೆ ಕೈಗೊಳ್ಳಲಿದ್ದು, ಸಂಜೆ 5 ಗಂಟೆಗೆ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ.








