donald trump – ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ ಮನೆ ಮೇಲೆ ತನಿಖಾ ಸಂಸ್ಥೆ ದಾಳಿ..
ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮನೆಗೆ ತನಿಖಾ ಸಂಸ್ಥೆ ಎಫ್ ಬಿಐ ( ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್) ದಾಳಿ ನಡೆಸಿದೆ. ತಮ್ಮ ಅಧಿಕಾರಾವಧಿಯ ಬಳಿಕವೂ ಟ್ರಂಪ್ ಕೆಲವೊಂದು ಗೌಪ್ಯ ದಾಖಲೆಗಳನ್ನು ತನ್ನ ಬಳಿ ಇಟ್ಟುಕೊಂಡಿದ್ದಾರೆ ಎಂಬ ಶಂಕೆಯ ಮೇಲೆ ಈ ದಾಳಿ ನಡೆದಿದೆ ಎನ್ನಲಾಗಿದೆ.
ಮಾಜಿ ಅಧ್ಯಕ್ಷ ಟ್ರಂಪ್ ಐಷಾರಾಮಿ ಪಾಮ್ ಹೌಸ್ ಮತ್ತು ರೆಸಾರ್ಟ್ ಮಾರ್-ಎ-ಲಿಗೊ ಮೇಲೆ ದಾಳಿ ನಡೆಸಲಾಗಿದೆ. ಭದ್ರತಾ ಪಡೆಗಳು ಟ್ರಂಪ್ ಮನೆಯನ್ನು ಸುತ್ತುವರಿದಿದ್ದು, ಶೋಧ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ.
ವರದಿಗಳ ಪ್ರಕಾರ, ಟ್ರಂಪ್ ಕಳೆದ ವರ್ಷ ಶ್ವೇತಭವನವನ್ನು ತೊರೆದಾಗ ತಮ್ಮೊಂದಿಗೆ ಅನೇಕ ದಾಖಲೆಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಈ ದಾಖಲೆಗಳನ್ನ ಹಲವಾರು ದೊಡ್ಡ ಪೆಟ್ಟಿಗೆಗಳಲ್ಲಿ ಮಾರ್-ಎ-ಲಿಗೋಗೆ ತೆಗೆದುಕೊಂಡು ಹೋಗಲಾಗಿದೆ ಎಂದು ಹೇಳಲಾಗುತ್ತದೆ. ಅಂದಿನಿಂದ, ಅಮೆರಿಕದ ಗುಪ್ತಚರ ಸಂಸ್ಥೆಗಳು ಟ್ರಂಪ್ ಮತ್ತು ಅವರ ನಿಕಟವರ್ತಿಗಳ ಮೇಲೆ ಕಣ್ಣಿಟ್ಟಿವೆ.
ದಾಳಿಗೆ ಪ್ರತಿಕ್ರಿಯಿಸಿರುವ ಟ್ರಂಪ್, ದೇಶದಲ್ಲಿ ಕರಾಳ ಸಮಯವೊಂದು ನಡೆಯುತ್ತಿದೆ ಎಂದಿದ್ದಾರೆ. ಯಾವುದೇ ಸೂಚನೆ ನೀಡದೆ ಈ ದಾಳಿ ನಡೆಸಲಾಗಿದೆ ಎಂದು ಇಬ್ಬರು ಟ್ರಂಪ್ ಆಪ್ತರು ನ್ಯೂಯಾರ್ಕ್ ಟೈಮ್ಸ್ಗೆ ತಿಳಿಸಿದ್ದಾರೆ. ಇನ್ನು ಈ ದಾಳಿಯ ಬಗ್ಗೆ ವಿವರ ನೀಡಲು ಪೊಲೀಸ್ ಅಧಿಕಾರಿಗಳು ನಿರಾಕರಿಸಿದ್ದಾರೆ.








