ಮೇವು ತಿಂದ ಲಾಲು ಗೆ ಮತ್ತೊಮ್ಮೆ ಜೈಲು ಯೋಗ ???? 5 ಪ್ರಕರಣದ ತೀರ್ಪು ಪ್ರಕಟ..
950 ಕೋಟಿ ರೂ.ಗಳ ದೇಶದ ಅತಿ ದೊಡ್ಡ ಮೇವು ಹಗರಣದ (ಡೊರಾಂಡಾ ಖಜಾನೆಯಿಂದ 139.35 ಕೋಟಿ ರೂ. ದುರುಪಯೋಗ ಪ್ರಕರಣ ) ತೀರ್ಪು ಮಂಗಳವಾರ ಹೊರ ಬಂದಿದೆ. ಆರ್‌ಜೆಡಿ ಮುಖ್ಯಸ್ಥ ಲಾಲು ಯಾದವ್ ಸೇರಿದಂತೆ 75 ಆರೋಪಿಗಳಿಗೆ ಸಿಬಿಐ ವಿಶೇಷ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಇದೇ ವೇಳೆ 24 ಮಂದಿಯನ್ನು ಖುಲಾಸೆಗೊಳಿಸಲಾಗಿದೆ.
ಶಿಕ್ಷೆಯ ಪ್ರಮಾಣವನ್ನು ಫೆಬ್ರವರಿ 21 ರಂದು ಪ್ರಕಟಿಸಲಾಗುವುದು. ಆರ್‌ಜೆಡಿ ಮುಖ್ಯಸ್ಥರಿಗೆ ಶಿಕ್ಷೆ ಪ್ರಕಟವಾದ ಕೂಡಲೆ ಪಾಟ್ನಾದಿಂದ ರಾಂಚಿವರೆಗಿನ ಬೆಂಬಲಿಗರ ಮನದಲ್ಲಿ ಹತಾಶೆ ಮೂಡಿದೆ. ಕೋರ್ಟ್ ಕಟ್ಟಡದ ತುಂಬ ಆರ್‌ಜೆಡಿ ನಾಯಕರಿಂದ ತುಂಬಿ ತುಳುಕುತ್ತಿದೆ. ಮುನ್ನಚ್ಚೆರಿಕೆಗಾಗಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ.
ಇದಕ್ಕೂ ಮುನ್ನ ಲಾಲು ಮೇವು ಹಗರಣದ 4 ಪ್ರಕರಣಗಳಲ್ಲಿ ದೋಷಿಯಾಗಿದ್ದಾರೆ. ಈ ಎಲ್ಲಾ ಪ್ರಕರಣಗಳಲ್ಲಿ ಜಾಮೀನಿನ ಮೇಲೆ ಹೊರಬಂದಿರುವ ಇವರು ಮಂಗಳವಾರದ ನ್ಯಾಯಾಲಯದ ತೀರ್ಪಿನಿಂದ ಮತ್ತೊಮ್ಮೆ ಜೈಲು ಸೇರಬೇಕಾಗುತ್ತದೆ. Lalu Prasad
ಜನವರಿ 29 ರಂದು, ವಿಶೇಷ ಸಿಬಿಐ ನ್ಯಾಯಾಧೀಶ ಎಸ್‌ಕೆ ಶಶಿ ನ್ಯಾಯಾಲಯವು ವಾದ-ಪ್ರತಿವಾದಗಳ ಮುಕ್ತಾಯದ ನಂತರ ಫೆಬ್ರವರಿ 15 ರಂದು ತೀರ್ಪಿನ ದಿನಾಂಕವನ್ನು ನಿಗದಿಪಡಿಸಿತ್ತು. ಎಲ್ಲಾ ಆರೋಪಿಗಳನ್ನು ಖುದ್ದು ನ್ಯಾಯಾಲಯಕ್ಕೆ ಹಾಜರಾಗುವಂತೆ ಆದೇಶಿಸಲಾಗಿತ್ತು. ಲಾಲು ಪ್ರಸಾದ್ ಎರಡು ದಿನಗಳ ಹಿಂದೆ ಫೆಬ್ರವರಿ 13 ರಂದು ವಿಚಾರಣೆಗೆ ಹಾಜರಾಗಲು ರಾಂಚಿ ತಲುಪಿದ್ದರು.
ನ್ಯಾಯಾಲಯದಲ್ಲಿ ವಿಚಾರಣೆಗೂ ಮುನ್ನ ಲಾಲು ಪರ ವಕೀಲ ಪ್ರಭಾತ್ ಕುಮಾರ್, ‘‘ಆರೋಪಿಯ ವಯಸ್ಸು 75 ವರ್ಷಕ್ಕೂ ಹೆಚ್ಚು. ಲಾಲು ಯಾದವ್ ಜೈಲಿಗೆ ಹೋಗುವ ಸ್ಥಿತಿಯಲ್ಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನ್ಯಾಯಾಲಯದಿಂದ ಪರಿಹಾರ ನಿರೀಕ್ಷಿಸಲಾಗಿದೆ. ಮೊದಲಿನ ಪರಿಸ್ಥಿತಿಯೇ ಬೇರೆ, ಇಂದು ಬೇರೆ ಎಂದು ವಾದ ಮಾಡಿದ್ದಾರೆ.
ಇತ್ತ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ನಿವಾಸದ ಹೊರಗೆ ಮೌನ ಆವರಿಸಿದೆ. ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ ರಾಬ್ರಿ ದೇವಿ ನಿವಾಸದಲ್ಲಿದ್ದಾರೆ. ಲಾಲು ಪ್ರಸಾದ್ ಯಾದವ್ ಪತ್ನಿ ಹಾಗೂ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ಕೂಡ ಪಾಟ್ನಾದಲ್ಲಿದ್ದಾರೆ. ಲಾಲು ಪ್ರಸಾದ್ ಅವರ ಹಿರಿಯ ಮಗಳು ಮಿಸಾ ಭಾರತಿ ರಾಂಚಿಯಲ್ಲಿ ಪತಿಯೊಂದಿಗೆ ಇದ್ದಾರೆ.
ಏನಿದು ಡೊರಾಂಡಾ ಖಜಾನೆ ಹಗರಣ ?
ಡೊರಂಡಾ ಖಜಾನೆಯಿಂದ 139.35 ಕೋಟಿ ರೂ.ಗಳನ್ನು ಅಕ್ರಮವಾಗಿ ಹಿಂಪಡೆದ ಈ ಪ್ರಕರಣದಲ್ಲಿ ಸ್ಕೂಟರ್‌ಗಳಲ್ಲಿ ನಕಲಿ ಪ್ರಾಣಿಗಳನ್ನು ಮತ್ತು ಮೇವು ಸಾಗಿಸುವ ಅಕ್ರಮ ಕಥೆಯಿದೆ. ಬೈಕ್ ಮತ್ತು ಸ್ಕೂಟರ್‌ಗಳಲ್ಲಿ ಪ್ರಾಣಿಗಳನ್ನು ಸಾಗಿಸಿದ ದೇಶದ ಮೊದಲ ಪ್ರಕರಣ ಇದು ಎಂದು ನಂಬಲಾಗಿದೆ.
ಈ ಹಗರಣದ ವಿಶೇಷವೆಂದರೆ, ಪ್ರಾಣಿಗಳನ್ನು ತರಲು ಇಲಾಖೆಯ ರಿಜಿಸ್ಟರ್‌ನಲ್ಲಿ ತೋರಿಸಿದ್ದ ವಾಹನಗಳ ಸಂಖ್ಯೆಗಳು ಸ್ಕೂಟರ್ಗಳದ್ದಾಗಿವೆ. ಸ್ಕೂಟರ್, ದ್ವಿಚಕ್ರವಾಹನ, ಮೊಪೆಡ್‌ಗಳಲ್ಲಿ ಲಕ್ಷಾಂತರ ಟನ್‌ಗಳಷ್ಟು ಜಾನುವಾರುಗಳ ಮೇವು, ಒಣಹುಲ್ಲು, ಹುಲ್ಲು, ಹಳದಿ ಜೋಳ, ಬಾದಾಮಿ, ಕೇಕ್, ಉಪ್ಪು ಮುಂತಾದವುಗಳನ್ನು ಸಾಗಿಸಿರುವುದು ಸಿಬಿಐ ತನಿಖೆಯಿಂದ ಪತ್ತೆಯಾಗಿದೆ. ತನಿಖಾ ತಂಡವು ದೇಶದ ಎಲ್ಲ ರಾಜ್ಯಗಳ ಸುಮಾರು 150 ಡಿಟಿಒ ಮತ್ತು ಆರ್‌ಟಿಒಗಳಿಂದ ವಾಹನದ ಸಂಖ್ಯೆಯನ್ನು ಪರಿಶೀಲಿಸಿ ಸಾಕ್ಷ್ಯ ಸಂಗ್ರಹಿಸಿದೆ.
ಅದೇ ರೀತಿ, ಹರ್ಯಾಣದಿಂದ ಉತ್ತಮ ತಳಿಯ ಎತ್ತುಗಳು, ಆಕಳುಗಳು ಮತ್ತು ಹೈಬ್ರಿಡ್ ಎಮ್ಮೆಗಳನ್ನು ಸಹ ಜಾರ್ಖಂಡ್‌ಗೆ ಸ್ಕೂಟರ್‌ಗಳಲ್ಲಿ ತರಲಾಯಿತು, ಎಂದು ಇಲಾಖೆಯ ರಿಜಿಸ್ಟರ್ ನಲ್ಲಿ ಕಂಡು ಬಂದಿದೆ.
ಹೇಳಿಕೆ ದಾಖಲಿಸಲು 15 ವರ್ಷ ಬೇಕಾಯಿತು
ಈ ಪ್ರಕರಣದಲ್ಲಿ 575 ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಿಕೊಳ್ಳಲು ಸಿಬಿಐಗೆ 15 ವರ್ಷಗಳು ಬೇಕಾಯಿತು. 99 ಆರೋಪಿಗಳ ಪೈಕಿ 53 ಆರೋಪಿಗಳು ಪೂರೈಕೆದಾರರಾಗಿದ್ದರೆ, 33 ಆರೋಪಿಗಳು ಪಶುಸಂಗೋಪನಾ ಇಲಾಖೆಯ ಅಂದಿನ ಅಧಿಕಾರಿಗಳು ಮತ್ತು ನೌಕರರಾಗಿದ್ದಾರೆ. 6 ಆರೋಪಿಗಳು ಅಂದಿನ ಖಜಾನೆ ಅಧಿಕಾರಿಗಳಾಗಿದ್ದು, ಪ್ರಕರಣದಲ್ಲಿ 6 ಆರೋಪಿಗಳಿದ್ದು, ಸಿಬಿಐಗೆ ಇದುವರೆಗೂ ಪತ್ತೆಯಾಗಿಲ್ಲ.