ತರಕಾರಿ ಮಾರಾಟ.. ಕಬಾಬ್ ಮಾರಾಟ.. ಡೆಲಿವರಿ ಬಾಯ್.. ಇದು ಮುಂಬೈನ ಮೂರು ಫುಟ್ಬಾಲ್ ಕೋಚ್ಗಳ ಕೊರೋನಾ ಲೈಫ್…!
ಕೊರೋನಾ ವೈರಸ್ ಸೋಂಕು ಮಾಡುತ್ತಿರುವ ಅವಾಂತರ ಅಷ್ಟಿಷ್ಟಲ್ಲ. ಮನುಕುಲವನ್ನೇ ತತ್ತರಿಸುವಂತೆ ಮಾಡುತ್ತಿರುವ ಕೊರೋನಾ ಸೋಂಕು ಆರ್ಥಿಕ ವ್ಯವಸ್ಥೆಯನ್ನೇ ನಲುಗಿ ಹೋಗುವಂತೆ ಮಾಡುತ್ತಿದೆ. ಲಾಕ್ ಡೌನ್ ಜೊತೆಗೆ ದಿನದಿಂದ ದಿನಕ್ಕೆ ಸೋಂಕು ಹೆಚ್ಚಾಗುತ್ತಿರುವುದರಿಂದ ಜನ ಭಯಭೀತರಾಗಿ ಬದುಕು ಸಾಗಿಸುವಂತಾಗಿದೆ.
ಇನ್ನು ಆರ್ಥಿಕ ಸ್ಥಿತಿಯನ್ನಂತೂ ಹೇಳುವುದೇ ಬೇಡ. ಮನೆ ಬಾಡಿಗೆಯಿಂದ ಹಿಡಿದು ದಿನ ನಿತ್ಯದ ಖರ್ಚು ವೆಚ್ಚಗಳನ್ನು ನೋಡಿಕೊಳ್ಳಬೇಕಾದ ಕುಟುಂಬಗಳು ಹಸಿವಿನಿಂದ ಬಳಲುತ್ತಿವೆ. ಇನ್ನೊಂದೆಡೆ ನಿರೋದ್ಯೋಗ ಸಮಸ್ಯೆ. ಕೋವಿಡ್-19 ಹೊಡೆತಕ್ಕೆ ಕೆಲಸ ಕಳೆದುಕೊಂಡವರು ಅನೇಕ ಮಂದಿ ಇದ್ದಾರೆ. ಕಂಪೆನಿಗಳು ಆರ್ಥಿಕ ಮುಗ್ಗಟ್ಟಿನಿಂದಾಗಿ ಮುಚ್ಚುವ ಸ್ಥಿತಿಗೆ ಬಂದಿವೆ. ಹೀಗಾಗಿ ಅನೇಕ ಮಂದಿ ಕೆಲಸವನ್ನು ಕಳೆದುಕೊಂಡಿದ್ದಾರೆ.
ಇಂತಹುದ್ದೇ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ ಮುಂಬೈನ ಮೂರು ಮಂದಿ ಫುಟ್ಬಾಲ್ ಕೋಚ್ಗಳು. ಜನ ಜೀವನ ಸಹಜ ಸ್ಥಿತಿಯಲ್ಲಿ ಇರುತ್ತಿದ್ರೆ ಈ ಮೂವರು ಕೋಚ್ಗಳು ಈಗ ಮೈದಾನದಲ್ಲಿ ಮಕ್ಕಳನ್ನು ಫುಟ್ಬಾಲ್ ಆಡಿಸುತ್ತಿದ್ದಾರೆ. ನಾಳೆಯ ಪಂದ್ಯವನ್ನು ಹೇಗೆ ಗೆಲ್ಲಬೇಕು ಎಂದು ಹುಡುಗರ ಜೊತೆ ಚರ್ಚೆ ಮಾಡುತ್ತಿದ್ರು. ಆದ್ರೆ ಈ ಮೂರು ಕೋಚ್ಗಳು ಈಗ ಕೆಲಸ ಕಳೆದುಕೊಂಡಿದ್ದಾರೆ. ಸಂಬಳವಿಲ್ಲ.. ಕೈಯಲ್ಲಿ ದುಡ್ಡೂ ಇಲ್ಲ. ಕುಟುಂಬದ ದಿನ ನಿತ್ಯದ ಖರ್ಚು ವೆಚ್ಚವನ್ನು ಭರಿಸಲು ಸಾಧ್ಯವಾಗುತ್ತಿಲ್ಲ. ಆಗ ಅವರು ಕಂಡುಕೊಂಡ ಉದ್ಯೋಗವೇ ಒಬ್ಬರು ತರಕಾರಿ ಮಾರಾಟ.. ಇನ್ನೊಬ್ಬರು ಕಬಾಬ್ ಮಾರಾಟ.. ಮತ್ತೊಬ್ಬರು ಡೆಲಿವರಿ ಬಾಯ್.
ಪ್ರಸಾದ್ ಭೋಸಾಲೆ.. ಇವರು ಮುಂಬೈನಲ್ಲಿ ಫುಟ್ಬಾಲ್ ಕೋಚ್ ಆಗಿ ಕೆಲಸ ಮಾಡುತ್ತಿದ್ದಾರೆ. ಹೇಳಿಕೊಳ್ಳೋಕೆ ಡಬಲ್ ಪದವಿಯನ್ನೂ ಪಡೆದುಕೊಂಡಿದ್ದರು. ಕೋವಿಡ್-19 ಸೋಂಕು ಬರುವುದಕ್ಕಿಂತ ಮುನ್ನ ಎಲ್ಲವೂ ಚೆನ್ನಾಗಿಯೇ ಇತ್ತು. ಆದ್ರೆ ಕೊರೋನಾ ಎಫೆಕ್ಟ್ ನಿಂದಾಗಿ ಈಗ ಕೆಲಸ ಕಳೆದುಕೊಂಡಿದ್ದಾರೆ.
ಹೀಗಾಗಿ ಪ್ರಸಾದ್ ಭೋಸಾಲೆ ಅವರು ಬದುಕಿನ ಅನಿವಾರ್ಯತೆಗಾಗಿ ತರಕಾರಿ ಮಾರಾಟ ಮಾಡುತ್ತಿದ್ದಾರೆ.
ನಾನು ತರಕಾರಿ ಮಾರಾಟ ಮಾಡಲು ಶುರು ಮಾಡಿದಾಗ ನನಗೆ ಮುಜುಗರವಾಗುತ್ತಿತ್ತು. ದೈಹಿಕ ಶಿಕ್ಷಣದಲ್ಲಿ ಪದವಿಯ ಜೊತೆಗೆ ಇನ್ನೊಂದು ಪದವಿಯನ್ನು ಪಡೆದುಕೊಂಡಿದ್ದೆ. ಆದ್ರೆ ಈಗ ತರಕಾರಿ ಮಾರಾಟ ಮಾಡುತ್ತಿದ್ದೇನೆ. ಮನೆಯಲ್ಲಿ ಹೊಟ್ಟೆ ಖಾಲಿಯಾಗಿಟ್ಟುಕೊಂಡು ಹಸಿವಿನಿಂದ ಬಳಲುತ್ತಿದ್ದಾಗ ಇದನ್ನೆಲ್ಲಾ ಯೋಚನೆ ಮಾಡುವುದಕ್ಕೂ ಪುರುಸೊತ್ತು ಇರುವುದಿಲ್ಲ. ನಾನು ತರಕಾರಿಗಳ ಮೂಟೆ ಕಟ್ಟಿಕೊಂಡು ಬೀದಿ ಬೀದಿಗೆ ಹೋಗಿ ತರಕಾರಿ ಮಾರಾಟ ಮಾಡುತ್ತಿದ್ದೇನೆ ಎಂದು ಹೇಳ್ತಾರೆ ಪ್ರಸಾದ್ ಭೋಸಾಲೆ.
ಪ್ರಸಾದ್ ಭೋಸಾಲೆ ಅವರು ಶಾಲೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಆದ್ರೆ ಕಳೆದ ಮಾರ್ಚ್ ತಿಂಗಳ ನಂತರ ಶಾಲಾ ಆಡಳಿತ ಮಂಡಳಿ ಇವರನ್ನು ಕೆಲಸದಿಂದ ವಜಾ ಮಾಡಿತ್ತು. ಹೀಗಾಗಿ
ಹೊಟ್ಟೆಪಾಡಿಗಾಗಿ ತರಕಾರಿ ವ್ಯಾಪಾರವನ್ನು ಮಾಡುತ್ತಿದ್ದಾರೆ.
ಸಿದ್ದೇಶ್ ಶ್ರೀವಾಸ್ತವ್… ಪ್ರತಿ ದಿನ ಎರಡು ಶಾಲೆಗಳಲ್ಲಿ ಫುಟ್ಬಾಲ್ ಕೋಚಿಂಗ್ ಮಾಡುತ್ತಿದ್ದರು. ಹಾಗೇ ಫುಟ್ಬಾಲ್ ಅಕಾಡೆಮಿಯಲ್ಲೂ ಕೆಲಸ ಮಾಡುತ್ತಿದ್ದರು. ಆದ್ರೆ ಕಳೆದ ಕೆಲವು ತಿಂಗಳುಗಳಿಂದ ಇವರಿಗೆ ಸಂಬಳವೇ ಬಂದಿಲ್ಲ. ಈ ಬಗ್ಗೆ ಅನೇಕ ಬಾರಿ ಪತ್ರ ಕೂಡ ಬರೆದಿದ್ದೇವೆ. ಆದ್ರೆ ವೇತನ ನೀಡಲು ಸಾಧ್ಯವಿಲ್ಲ. ನಿಮ್ಮನ್ನು ಕೆಲಸದಿಂದ ವಜಾ ಮಾಡಿದ್ದೇವೆ ಎಂಬ ಉತ್ತರ ಬಂತು. ನನ್ನ ತಂದೆ ನಿವೃತ್ತಿಯಾಗಿದ್ದಾರೆ. ಹೀಗಾಗಿ ನಾನೇ ನನ್ನ ಕುಟುಂಬಕ್ಕೆ ಆಸರೆಯಾಗಿದ್ದೇನೆ. ಅನಿವಾರ್ಯವಾಗಿ ಈಗ ನಾನು ಕಬಾಬ್ ಮಾರಾಟ ಮಾಡುತ್ತಿದ್ದೇನೆ ಅಂತಾರೆ ಸಿದ್ದೇಶ್ ಶ್ರೀವಾಸ್ತವ್.
ಇವರ ಹೆಸರು ಸಮ್ರಾಟ್ ರಾಣಾ.. ಸಿಎಸ್ಪಿಐ ಫುಟ್ಬಾಲ್ ಅಕಾಡೆಮಿಯ ಮುಖ್ಯಸ್ಥ. ಮುಂಬೈನಲ್ಲಿ 9 ಅಕಾಡೆಮಿಗಳಿವೆ. ಹಾಗೇ ಐ ಲೀಗ್ ಜೂನಿಯರ್ ತಂಡದ ಕೋಚ್ ಕೂಡ ಆಗಿದ್ದಾರೆ. ರಾಣಾ ಅವರ ಸಹೋದರ ಫುಟ್ಬಾಲ್ ಕೋಚ್. ಆದ್ರೆ ಇವರಿಬ್ಬರಿಗೆ ಈಗ ಕೆಲಸವಿಲ್ಲ. ಸದ್ಯ ನಾನು ಈಗ ಡೆಲಿವರಿ ಬಾಯ್. ಝೋಮಾಟೋ, ಸ್ವಿಗ್ವಿ ಮೊದಲಾದ ಕಂಪೆನಿಗಳಲ್ಲಿ ಕೆಲಸ ಕೇಳಿಕೊಂಡು ಹೋಗಿದ್ದೆ. ಆದ್ರೆ ಅಲ್ಲಿ ಖಾಲಿ ಇರಲಿಲ್ಲ. ಹೀಗಾಗಿ ಸ್ಥಳೀಯ ರೆಸ್ಟೋರೆಂಟ್ವೊಂದರಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದೇನೆ. ನನ್ನ ಒಬ್ಬ ಸಹೋದರ ಫುಟ್ಬಾಲ್ ಕೋಚ್. ಇನ್ನೊಬ್ಬ ಸಹೋದರ ಫುಟ್ಬಾಲ್ ಆಟಗಾರ. ಈಗ ಯಾರಿಗೂ ಕೆಲಸವಿಲ್ಲ . ಅನಿವಾರ್ಯವಾಗಿ ಈಗ ಈ ಕೆಲಸ ಮಾಡಬೇಕಾಗಿದೆ ಅಂತಾರೆ ಸಮ್ರಾಟ್ ರಾಣಾ.
ಒಟ್ಟಿನಲ್ಲಿ ಕೊರೋನಾ ಸೋಂಕು ಬದುಕನ್ನು ಅಸ್ಥಿರಗೊಳಿಸುವಂತೆ ಮಾಡಿದೆ. ಆದ್ರೆ ಕೆಲಸವಿಲ್ಲ ಅಂತ ಸುಮ್ಮನೆ ಯೋಚನೆ ಮಾಡಿಕೊಂಡು ಕುಳಿತ್ರೆ ಬದುಕಲು ಸಾಧ್ಯವಿಲ್ಲ. ಹೀಗಾಗಿ ಬದುಕಲು ನಾವು ಅನ್ಯ ಮಾರ್ಗವನ್ನು ಹುಡುಕಲೇಬೇಕು. ಯಾಕಂದ್ರೆ ಜೀವನ ಅಂದ ಮೇಲೆ ಇದೆಲ್ಲಾ ಇದ್ದೇ ಇರುತ್ತೆ.








