ದೇಶದಲ್ಲಿ ಮೊದಲ ಬಾರಿಗೆ ಒಂದೇ ದಿನ 24,850 ಕೊರೊನಾ ಪ್ರಕರಣ
ಹೊಸದಿಲ್ಲಿ, ಜುಲೈ 5: ದೇಶದಲ್ಲಿ ಮೊದಲ ಬಾರಿಗೆ 24 ಗಂಟೆಯಲ್ಲಿ 24,850 ಕೊರೊನಾ ಪ್ರಕರಣಗಳು ದಾಖಲಾಗಿ ಹೊಸ ದಾಖಲೆ ಬರೆದಿದೆ. ದಿನೇ ದಿನೇ ಕೊರೊನಾ ಪೀಡಿತರ ಸಂಖ್ಯೆ ವ್ಯಾಪಕವಾಗಿ ಏರಿಕೆಯಾಗುತ್ತಿದ್ದು, ಜೊತೆಗೆ ಸಾವಿನ ಸಂಖ್ಯೆಯೂ ಹೆಚ್ಚುತ್ತಿರುವುದು ಆತಂಕ ಮೂಡಿಸಿದೆ.
ಶನಿವಾರ ಬೆಳಗ್ಗೆ 8ಗಂಟೆಯಿಂದ ಭಾನುವಾರ ಬೆಳಗ್ಗಿನ ಅವಧಿಯ ವರೆಗೆ 24,850 ಹೊಸ ಕೊರೊನಾ ವೈರಸ್ ಸೋಂಕಿನ ಪ್ರಕರಣ ದಾಖಲಾಗಿದ್ದು, 613 ಜನರು ಮೃತಪಟ್ಟಿದ್ದಾರೆ. ಈ ಮೂಲಕ ದೇಶದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 6,73,105ಕ್ಕೆ ಏರಿಕೆಯಾಗಿದೆ. ಕೊರೊನಾ ಸೋಂಕಿತ ರಾಷ್ಟ್ರಗಳ ಪಟ್ಟಿಯಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿದ್ದರೆ, ಎರಡನೇ ಸ್ಥಾನದಲ್ಲಿ ಬ್ರೆಜಿಲ್ ಇದೆ. ಭಾರತಕ್ಕಿಂತ ಕೇವಲ 800 ಪ್ರಕರಣಗಳು ಹೆಚ್ಚಿರುವ ರಷ್ಯಾ ಮೂರನೇ ಸ್ಥಾನದಲ್ಲಿದೆ.

ಭಾರತದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿನ ಪ್ರಕರಣಗಳು ಗಮನಾರ್ಹ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ.
ದೇಶದಲ್ಲಿ ಕೊರೊನಾ ವೈರಸ್ ಸೋಂಕಿಗೆ ಬಲಿಯಾದವರ ಸಂಖ್ಯೆ 19,268ಕ್ಕೆ ಏರಿಕೆಯಾಗಿದ್ದು, ಇಲ್ಲಿಯವರೆಗೆ 4,09,083 ಜನರು ಗುಣಮುಖರಾಗಿದ್ದಾರೆ. ಕಳೆದ 9 ದಿನಗಳಿಂದ ದೇಶದಲ್ಲಿ ಪ್ರತಿದಿನ 18,000ಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ದಾಖಲಾಗುತ್ತಿವೆ.








