5 ತಲೆಮಾರುಗಳಿಂದಲೂ ಗೊಂಡಾರಣ್ಯದ ಶಿಖರದಲ್ಲೇ ವಾಸ.. ನಾಗರೀಕ ಪ್ರಪಂಚಕ್ಕೆ ಪರಿಚಯವೇ ಇಲ್ಲದ ಪುಟ್ಟ ಜನವಸತಿ.. ವಿಶಿಷ್ಟ ನಂಬಿಕೆಗಳೊಂದಿಗೆ ಸಾತ್ವಿಕ ಬದುಕು ನಡೆಸುವ ಅಪರಿಚಿತರು.. ಹಾಲಕ್ಕಿ ಒಕ್ಕಲಿಗರ ಹಟ್ಟಿಯಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದ ನೆನಪುಗಳ ಸ್ಮರಣೆ..
‘ಅಡವಿ ಮಕ್ಕಳ ಒಡನಾಟದಲ್ಲಿ ಕಳೆದ ಎರಡು ದಿನ, ಮರೆತೇನೆಂದರೂ ಮರೆಯಲಿ ಹ್ಯಾಂಗ..
ಕಾರವಾರ ಹಾಗೂ ಗೋವಾ ಗಡಿಯಲ್ಲಿ ಹಿರೇಮನೆ ಮಲೇಗದ್ದೇ ಅನ್ನೋ ಒಂದು ಕುಗ್ರಾಮ ಕಾಡಿನ ನಡುವೆ ಇದೆ. ಅಲ್ಲಿಗೆ ತಲುಬೇಕಿದ್ದರೇ ಏಳು ಗುಡ್ಡ ಹತ್ತಿ ಹೋಗಬೇಕು ಏಳೆಂಟು ಹಳ್ಳಗಳು ಸಿಗುತ್ತವೆ. ಗುಡ್ಡದ ನೆತ್ತಿಯಲ್ಲಿ ಐದಾರು ಆದಿವಾಸಿಗಳ ಮನೆ ಇದೆ. ಅಲ್ಲೊಂದಷ್ಟು ಜಮೀನು ಮಾಡಿಕೊಂಡು ಹಸುಗಳನ್ನು ಸಾಕಿಕೊಂಡು ಬದುಕುತ್ತಿದ್ದಾರೆ ಒಂದೇ ಮೂಲ ಕುಟುಂಬದ ಐದಾರು ಉಪಕುಟುಂಬಗಳ ಜನ. ಅಲ್ಲಿ ಇಂದಿಗೂ ಸೀಮೆ ಎಣ್ಣೆ ನಿಷಿದ್ಧ. ಅವರ ಜಮೀನಿನಲ್ಲಿ ಚಪ್ಪಲಿ ಹಾಕಿಕೊಂಡು ಹೋಗುವ ಹಾಗಿಲ್ಲ. ಪಾಂಡವರು ವನವಾಸ ಮಾಡಿದ ಜಾಗ ಅಂತಾರೆ ಆ ಹಾಡ್ಯವನ್ನು. ಅಲ್ಲಿ ಮದ್ಯಪಾನ ನಿಷಿದ್ಧ. ಕರೆಂಟ್ ಗಗನ ಕುಸುಮ. ದಟ್ಟ ಅಡವಿಯ ಮಧ್ಯ ಅವರು ಅಪರಿಚಿತರಂತೆ ಬದುಕ್ತಿದ್ದಾರೆ. ಕಡಿದಾದ ಗಿರಿಶಿಖರದ ತುದಿಗೆ ಮಂಗಳೂರು ಹಂಚು ಹೊತ್ತು ಹೋಗಿ ಮನೆ ಕಟ್ಟಿಕೊಂಡಿದ್ದಾರೆ ಆ ಹಾಲಕ್ಕಿ ಒಕ್ಕಲಿಗ ಸಮುದಾಯದ ಮಂದಿ.
ಅವರ ಬದುಕೇ ಹೋರಾಟ. ಶ್ರಮಜೀವಿಗಳು. ಸರ್ಕಾರ ಅವರಿಗೆ ಓಟಿಂಗ್ ಕಾರ್ಡ್ ಮಾಡಿಕೊಟ್ಟಿದೆ. ಅವರ ಜಮೀನಿಗೆ ಖಾತೆ ಇದೆ. ಗರ್ಭಿಣಿಯರು ಏಳು ತಿಂಗಳಾಗುತ್ತಿದ್ದಂತೆ ಗುಡ್ಡ ಇಳಿದು ಕೆಳಗೆ ಬರಬೇಕು. ಅವರು ಮತ್ತೆ ಮನೆ ಸೇರುವುದು ಕೂಸು ಹುಟ್ಟಿದ ನಂತರವೇ. ಮಕ್ಕಳು ಶಾಲೆಗೆ ಹೋಗಬೇಕಂದರೆ ಬರೋಬ್ಬರಿ ಏಳು ಕಿಲೋಮೀಟರ್ ಕಗ್ಗಾಡಿನಲ್ಲೇ ಗುಡ್ಡ ಇಳಿಯಬೇಕು. ಅಲ್ಲಿನ ಯುವಕರಿಗೆ ಹೆಣ್ಣು ಕೊಡಲೂ ಯಾರೂ ಮುಂದೆ ಬರಲ್ಲ. ಇಷ್ಟಾದ್ರೂ ಅವರು ಆ ಸ್ವರ್ಗ ಬಿಟ್ಟು ಬರಲೊಲ್ಲರು. ಎರಡು ವರ್ಷಗಳ ಹಿಂದೆ ವಿಶೇಷ ಕಾರ್ಯಕ್ರಮವೊಂದರ ಚಿತ್ರೀಕರಣಕ್ಕೆ ಹೋಗಿದ್ದೆ. ಈ ಕರೋನಾ ಕಾಲದಲ್ಲಿ ಅಲ್ಲಿನ ಪರಿಸರ, ಅಡವಿ ಮಕ್ಕಳ ಪರಿಶ್ರಮದ ಬದುಕು ಹಾಗೂ ಹಚ್ಚ ಹಸುರಿನ ಘೊಂಡಾರಣ್ಯದ ಮಧ್ಯೆ ಬೆಚ್ಚಗೆ ಬದುಕು ಕಟ್ಟಿಕೊಂಡ ಅವರ ಹಠ ಯಾಕೋ ಪದೇ ಪದೇ ನೆನಪಾಯಿತು. ಆ ನೆನಪುಗಳನ್ನು ಕೆದಕುವ ಪ್ರಯತ್ನವೇ ಈ ಲೇಖನ.
ಪ್ರಾಯಶಃ ಇಂತದ್ದೊಂದು ಜನವಸತಿ ಇರುವುದು ಬಹುತೇಕ ಹೊರಗಿನ ನಾಗರೀಕ ಪ್ರಪಂಚಕ್ಕೆ ತಿಳಿದಿಲ್ಲ. ಯಾಕೆಂದ್ರೆ, ಈ ಕಾಡಿನ ಮಕ್ಕಳು, ದಟ್ಟಕಾಡಿನ ಆಳ ಗರ್ಭದಲ್ಲಿ ತಮ್ಮ ಪಾಡಿಗೆ ತಾವು ಸಣ್ಣ ಸೂರು ಕಟ್ಟಿಕೊಂಡು ಬದುಕ್ತಿದ್ದಾರೆ. ಇಲ್ಲಿಗೆ ತಲುಪಬೇಕೆಂದ್ರೆ ಸುಮಾರು ಆರೇಳು ಕಿಲೋ ಮೀಟರ್ ಕಗ್ಗಾಡಿನ ಏರು ಬೆಟ್ಟವನ್ನು ಏರಬೇಕು. ಈ ಹಟ್ಟಿಯ ಹಾಲಕ್ಕಿ ಒಕ್ಕಲಿಗರ ಸಮುದಾಯ ಕಳೆದ ಐದಾರು ಶತಮಾನಗಳಿಂದ ಇಲ್ಲಿ ಗುಡಿಸಲು ಕಟ್ಟಿಕೊಂಡು ಕೃಷಿ ಮಾಡಿಕೊಂಡು ತಮ್ಮಷ್ಟಕ್ಕೆ ತಾವು ಯಾರ ಉಸಾಬರಿಯೂ ಇಲ್ಲದೆ ವಾಸ ಮಾಡ್ತಿದ್ದಾರೆ.. ಇಲ್ಲೊಂದು ನಾಗರೀಕ ವಸಾಹತು ಇದೆಯೆಂಬುದು ಪ್ರಪಂಚಕ್ಕೆ ಗೊತ್ತಾಗದಷ್ಟು ನಿಶ್ಯಬ್ಧವಾಗಿ ಇವರ ಬದುಕು ನಡೆಯುತ್ತಿದೆ.
ಇಲ್ಲಿಗೆ ತಲುಪಲು ನಮಗೆ ಬರೋಬ್ಬರಿ 4 ಗಂಟೆ ತಗಲಿತ್ತು. ಇಬ್ಬರು ಸ್ಥಳೀಯ ಗೈಡ್ಗಳ ಸಹಾಯದಿಂದ ನಾವಿಲ್ಲಿಗೆ ಬಂದಾಗ ಕತ್ತಲು ಕವೆದಿತ್ತು. ಅದಾಗಲೆ ಒಂದೆರುಡು ಮಳೆ ಸುರಿದು ಹೋಗಿತ್ತು. ವಾತಾವರಣದಲ್ಲಿ ಆಹ್ಲಾದಕರ ತಂಪಿತ್ತು. ನಮ್ಮ ಊಟ ಉಪಚಾರಗಳ ನೋಡಿಕೊಂಡ ಹಟ್ಟಿಯ ಹಿರಿಯ ತಮ್ಮ ಜೀವನ ಶೈಲಿಯ ಸಂಪೂರ್ಣ ವಿವರ ನೀಡಿದ್ರು.
ವಿಶಾಲ ಪಶ್ಚಿಮಘಟ್ಟದ ಅರಣ್ಯದಿಂದ ಒಂದು ಬದಿಗೆ ಇಳಿದರೆ ಕಾರವಾರ ಅಥವಾ ಕೈಗಾ ಸಿಗುತ್ತದೆ. ಇನ್ನೊಂದು ಕಡೆಯಿಂದ ಇಳಿದರೆ ಅಂಕೋಲ ತಾಲೂಕಿಗೆ ತಲುಪಬಹುದು. ಅದರ ಹಿಂಭಾಗದಲ್ಲಿ ಕರ್ನಾಟಕ-ಗೋವಾ ರಾಜ್ಯಗಳ ಗಡಿ ಇದೆ. ಯಾವುದೇ ಕಡೆಗೆ ಇಳಿಯುವುದಾದ್ರೂ ಕನಿಷ್ಟ 6 ಕಿಲೋಮೀಟರ್ ಇಳಿಯಲೇಬೇಕು. ಮಳೆಗಾಲದಲ್ಲಿ ಕಾಡಿನ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತವೆ. ಕೊಂಚ ಯಾಮಾರಿದ್ರೂ ದೇಹ ಪ್ರಪಾತಕ್ಕೆ ಉರುಳುತ್ತದೆ. ಇಂಬಳು ಹುಳಗಳು ರಕ್ತ ಹೀರಲು ಬಾಯಿ ಕಳೆದು ಕೂತಿರುತ್ತವೆ. ಕಾಡಿನಲ್ಲಿ ಹುಲಿ ಸಂಚಾರವಷ್ಟೇ ಅಲ್ಲದೇ ಕಾಡುಕೋಣಗಳು, ಚಿರತೆ, ಕರಡಿಗಳಂತಹ ಪ್ರಾಣಿಗಳಿವೆ. ಒಂದರ್ಥದಲ್ಲಿ ಇದು ಹೊರಜಗತ್ತಿನಿಂದ ಸಂಪೂರ್ಣ ಸಂಪರ್ಕ ಕಳೆದುಕೊಂಡ ದಟ್ಟಾರಣ್ಯದ ಬುಡಕಟ್ಟು ಹಟ್ಟಿ.
ಗುಡ್ಡದ ತುತ್ತತ್ತುದಿಯಲ್ಲಿರುವ ಈ ಹಟ್ಟಿಯ ಜನ ಇಲ್ಲೇ ಪಕ್ಕದ ಇನ್ನೊಂದು ಪ್ರದೇಶದಲ್ಲಿರುವ ದೇವರನ್ನು ನಂಬಿದ್ದಾರೆ. ಈ ಪ್ರದೇಶದಲ್ಲಿ ಪಾಂಡವರ ವನವಾಸ ನಡೆದಿತ್ತು ಅನ್ನುವ ದೃಢ ನಂಬಿಕೆಯಿಂದ ಈ ಜನ ತಮ್ಮ ವಸತಿ ಪ್ರದೇಶವನ್ನು ಅನನ್ಯ ಪಾವಿತ್ರ್ಯದಿಂದ ಕಾಪಾಡಿಕೊಂಡು ಬಂದಿದ್ದಾರೆ. ಇಲ್ಲಿ ಹಿಂದಿನಿಂದಲೂ ಮಧ್ಯಪಾನ ನಿಷಿದ್ಧ. ಇಲ್ಲಿನ ಗದ್ದೆಗಳಲ್ಲಿ ಚಪ್ಪಲಿ ಹಾಕಿಕೊಂಡು ಇಳಿಯುವುದು ಘೋರ ಅಪರಾಧ. ಪ್ರಕೃತಿಯ ಜೊತೆಗೆ ಅನುಸಂಧಾನ ಮಾಡಿಕೊಂಡು ಬದುಕುವ ಈ ಮಂದಿ ಇಂದಿಗೂ ಸೀಮೆ ಎಣ್ಣೆ ಉಪಯೋಗಿಸುವುದಿಲ್ಲ. ಹತ್ತಿರದ ಕೆರೆಯಿಂದ ದಿನನಿತ್ಯದ ಅವಶ್ಯಕತೆಗೆ ಬೇಕಾದ ನೀರು ಸಿಗುತ್ತದೆ. ಇಲ್ಲಿರುವ 16 ಎಕರೆ ಕೃಷಿ ಭೂಮಿಗೂ ಖಾತೆ ಇದೆ. ಒಂದೇ ಕುಟುಂಬದ ಅಣ್ಣ ತಮ್ಮಂದಿರು ಕೃಷಿ ಮಾಡ್ತಿದ್ದಾರೆ. ತಮ್ಮ ದಿನನಿತ್ಯದ ಅವಶ್ಯಕತೆಗೆ ಬೇಕಿರುವ ಭತ್ತವನ್ನು ಒನಕೆಯಲ್ಲಿ ಕುಟ್ಟಿ ಅಕ್ಕಿ ಮಾಡುತ್ತಾರೆ. ಉಳಿದ ಭತ್ತವನ್ನು ಕೆಳಗೆ ಹೊತ್ತುಕೊಂಡು ಹೋಗಿ ಮಾರಾಟ ಮಾಡ್ತಾರೆ. ಇಲ್ಲಿ ಅಡಿಕೆ ಹಾಗೂ ಬಾಳೆಯನ್ನೂ ಬೆಳೆಯಲಾಗತ್ತೆ. ಅಡುಗೆಗೆ ಬೇಕಾದ ತರಕಾರಿ ಬೆಳೆಯುವ ಜೊತೆಗೆ ಜಾನುವಾರುಗಳನ್ನು ಹಾಗೂ ಕೋಳಿಗಳನ್ನು ಸಾಕಿಕೊಂಡಿದ್ದಾರೆ.
ಇಲ್ಲಿನ ಜನರಿಗೆ ಓಟರ್ ಐಡಿ ಹಾಗೂ ಆಧಾರ್ ಕಾರ್ಡ್ ಮಾಡಿಸಿಕೊಡಲಾಗಿದೆ. ಆದ್ರೆ ಈ ಜನರ ಕಷ್ಟ ಕಾರ್ಪಣ್ಯಕ್ಕೆ ಸ್ಫಂದಿಸುವ ಜನಪ್ರತಿನಿಧಿಗಳಾಗಲೀ, ಅಧಿಕಾರಿಗಳಾಗಲೀ ಇಲ್ಲ. ಚುನಾವಣೆಗಳು ಬಂದಾಗ ಹಟ್ಟಿಯ ಎಲ್ಲಾ ಜನರು ಕಾಡು ಬಿಟ್ಟು ನಾಡಿಗೆ ನಡೆದು ಬಂದು ತಮ್ಮ ಮತದಾನದ ಹಕ್ಕು ಚಲಾಯಿಸುತ್ತಾರೆ. ಆದ್ರೆ ಇವರ ಬೇಡಿಕೆಯನ್ನು ಕೇಳಿಸುಕೊಳ್ಳುವ ಸೌಜನ್ಯ ಯಾವ ಜನಪ್ರತಿನಿಧಿಗಳಿಗೂ ಇಲ್ಲ.
ಅಂದ ಹಾಗೆ ಈ ಹಟ್ಟಿಯ ಜನ ಇಲ್ಲಿನ ಶುದ್ಧ, ಸಾತ್ವಿಕ ಬದುಕಿಗೆ ಒಗ್ಗಿಹೋಗಿದ್ದಾರೆ. ಇವರಿಗೆ ಯಾವುದೇ ಬದಲಿ ಪ್ರದೇಶವನ್ನು ಕೊಡುವ ಮಾತು ಕೊಟ್ಟರೂ ಇವರು ಈ ಭೂಮಿಯನ್ನು ಬಿಟ್ಟು ಬರುವುದಿಲ್ಲ. ಇವರಿಗೆ ಈ ಪ್ರದೇಶದ ಮೇಲೆ ಭಾವನಾತ್ಮಕವಾದ ನಂಟಿದೆ. ಇವರ ದೇವರು, ಆಚರಣೆ ಹಾಗೂ ಜೀವನ ಶೈಲಿ ಭಿನ್ನವಾದರೂ ಆಶ್ಚರ್ಯವಾದ್ರೂ ಮೆಚ್ಚುಗೆ ಮೂಡಿಸತ್ತೆ. ಇಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸದ ಸಮಸ್ಯೆ ಇದೆ, ಅನಿವಾರ್ಯತೆ ಎದುರಾದ್ರೆ ವೈದ್ಯಕೀಯ ನೆರವು ಲಭ್ಯವಿಲ್ಲ. ಆದ್ರೂ ಈ ಜನ ಈ ಸ್ಥಳ ಬಿಟ್ಟು ಬರಲು ಒಲ್ಲೆ ಅಂತಾರೆ. ಇಲ್ಲಿನ ಯುವಕರಿಗೆ ಹೆಣ್ಣು ಕೊಡಲು ಹಿಂದೆ ಮುಂದೆ ನೋಡಬೇಕಾದ ಸ್ಥಿತಿ ಇದೆ. ಆದ್ರೂ ಇಲ್ಲಿನ ಮಂದಿಗೆ ತಮ್ಮ ಪೂರ್ವಜರ ಮಣ್ಣಿನ ಮೇಲಿನ ಆಸ್ಥೆ ಕಿಂಚಿತ್ತೂ ಕಡಿಮೆಯಾಗಿಲ್ಲ.
ಇಲ್ಲಿಗೆ ಹೋಗಬೇಕು ಅನ್ನುವ ವಿಚಾರ ಪ್ರಸ್ತಾಪ ಮಾಡಿದ್ದಾಗ ನಾನು ಕೆಲಸ ಮಾಡುತ್ತಿದ್ದ ವಾಹಿನಿಯ ಸಿರಸಿ ವರದಿಗಾರ ಹೇಳಿದ್ದ ಮೊದಲನೆಯ ಮಾತೇ ಆಗೋದಿಲ್ಲ ಬಿಡಿ ಸಾರ್. ಬಹಳ ತ್ರಾಸಿದೆ. ಆದ್ರೆ ಕಾಡಿನಲ್ಲೇ ನನ್ನ ಬಾಲ್ಯ ಕಳೆದಿದ್ದ ನನಗೆ, ಆಗುಂಬೆಯಂತಹ ಗೊಂಡಾರಣ್ಯ ನೋಡಿದವನಾದ್ದರಿಂದ ಅದೊಂದು ದೊಡ್ಡ ಸವಾಲು ಅಂತ ಅನ್ನಿಸಿರಲಿಲ್ಲ. ಆದ್ರೆ ಸಂಜೆ 4:45ರ ಸುಮಾರಿಗೆ ಕತ್ತಲು ಕಾನಿನ ಕಡಿದಾದ ಗುಡ್ಡ ಹತ್ತಲು ಶುರು ಮಾಡಿದ ನಂತರ ಅದ್ರ ನಿಜವಾದ ಕಷ್ಟ ಗೊತ್ತಾಯ್ತು. ಉಸಿರ ತತ್ತಿ ಸಿಕ್ಕಿಕ್ಕೊಳ್ಳುತ್ತಿತ್ತು. ಕೊಂಚ ಅನಾರೋಗ್ಯವೂ ಇದ್ದ ಕಾರಣ, ಏದುಸಿರು ಬರುತ್ತಿತ್ತು. ಹೆಣಬಾರದ ಟ್ರೈಪ್ಯಾಡ್, ಕ್ಯಾಮರಾ, ನಮ್ಮ ಬ್ಯಾಗುಗಳ ಸಂಗಡ ಅರಣ್ಯಾವರೋಹಣ ನಡೆಸುತ್ತಿದ್ವಿ. ಮಳೆಯಾಗಿತ್ತು. ಕಾಲು ಜಾರುತ್ತಿತ್ತು. ಕೊಂಚ ಯಾಮಾರಿದ್ರೂ ಕಾಡಿನಲ್ಲಿ ದಾರಿ ತಪ್ಪಿ ರಾತ್ರಿ ಅರಣ್ಯ ರೋದನೆ ಮಾಡಬೇಕಾಗಿತ್ತು. ಕಾಡಿನಲ್ಲಿ ಹುಲಿ ಸಂಚರಿಸುತ್ತದೆ ಅನ್ನುವ ವಿಚಾರ ಕಿವಿಗೆ ಬೀಳುತ್ತಲೇ ಮೈ ಬೆವೆತು ತೊಪ್ಪೆಯಾಗ್ತಿತ್ತು. ಥಂಡಿ ವಾತಾವರಣವಿದ್ದರೂ ಮೈ ಬೆಚ್ಚಗಾಗಿತ್ತು. ಹೃದಯದ ಬಡಿತ ಡೈನಾಮೆಟ್ ನಂತೆ ಕಿವಿಗೆ ಅಪ್ಪಳಿಸುತ್ತಿತ್ತು. ನಾಲ್ಕು ಗುಡ್ಡ ಏಳು ಹಳ್ಳ ದಾಟಿ ಶಿಖರ ತುದಿ ಮುಟ್ಟುವ ವೇಳೆಗೆ ನರಕದರ್ಶನವಾಗಿತ್ತು. ಆದ್ರೆ ಕೊನೆಯ ಬಂಡೆಯ ಕೆಳಗಿದ್ದ ಕುಂತೀ ತೀರ್ಥವೆನ್ನುವ ವಿಸ್ಮಯ ನೀರಿನ ಗುಟುಕು ಹನಿ ಗಂಟಲಿಗಿಳಿಯುತ್ತಿದ್ದಂತೆ ಆಗಿದ್ದ ಎಲ್ಲಾ ಆಯಾಸವೂ ಪರಿಹಾರವಾಗಿತ್ತು. ಆನಂತರ ಕಂಡಿದ್ದೆಲ್ಲವೂ ಸ್ವರ್ಗವೇ.
ಅದು ಹಿರೇಮನೆ ಹಟ್ಟಿ. ಹುಲ್ಲಿನ ಗುಡಿಸಲು ಕಟ್ಟಿಕೊಂಡ ಅಡವಿ ಮಕ್ಕಳು, ಹಾಲಕ್ಕಿ ಸಮುದಾಯದವರು ಅಲ್ಲಿ ಪ್ರತ್ಯೇಕ ಲೋಕ ನಿರ್ಮಿಸಿಕೊಂಡು ಬದುಕುತ್ತಿದ್ದಾರೆ. ಆ ವಾತವರಣದಲ್ಲಿ ದೈವಿಕ ಶಕ್ತಿಯಿದೆ. ಮೋಡಗಳು ನೆತ್ತಿ ಮೂಸಿ ಹೋಗುತ್ತವೆ. ಸದಾ ತಂಗಾಳಿ ಬೀಸುತ್ತದೆ. ಸುತ್ತಲೆತ್ತ ನೋಡಿದರೂ ಹಸಿರು ವನಸಿರಿ, ಶುದ್ದ ಗಾಳಿ, ಶುದ್ದ ನೀರು, ಶುದ್ದ ವಾತಾವರಣ ಆಧ್ಯಾತ್ಮಿಕ ಆಸಕ್ತಿಯನ್ನು ವೃದ್ಧಿಸುವ ತಾಕತ್ತು ಆ ಪರಿಸರಕ್ಕಿದೆ. ಅದಕ್ಕೆ ಆ ಜನ ಆ ಸ್ವರ್ಗವನ್ನು ಬಿಟ್ಟು ಬರಲಾರರು.
ಆ ಪ್ರಕೃತಿಯ ಅದ್ಭುತ ವೈಭವ ನೋಡಿದ ನಂತರ ನಮಗೂ ತಿರುಗಿ ಬರುವ ಮನಸಿರಲಿಲ್ಲ. ಆದ್ರೆ ಈ ಸಿರಿವಂತಿಕೆಯನ್ನು ಜಗತ್ತಿಕೆ ತೋರಿಸಿ ಹೊಟ್ಟೆ ಉರಿಸಬೇಕಿತ್ತು. ಪಾಂಡವರು ವನವಾಸ ಮಾಡಿದ ನೆಲ ಅನ್ನುವ ಒಂದು ನಂಬಿಕೆಯ ಆಧಾರದಲ್ಲಿ ಶತಶತಮಾನಗಳಿಂದ ಸೀಮೆಎಣ್ಣೆಯ ಬದಲು ಎಳ್ಳೆಣ್ಣೆ ಉರಿಸುವ ಅಲ್ಲಿನ ಜನ ಜೀವನದಲ್ಲಿ ಮಧ್ಯಪಾನ ಈಗಲೂ ನಿಷಿದ್ಧ ಹಾಗೂ ಅವರ ಜಮೀನಿನಲ್ಲಿ ಚಪ್ಪಲಿ ಹಾಕಿ ನಡೆಯುವುದು ತಪ್ಪು. ಅಲ್ಲಿನ ಮನೆಗಳಿಗೆ ಈಗೀಗ ಕೈಗಾ ಸಂಸ್ಥೆಯಿಂದ ಸೋಲಾರ್ ದೀಪಗಳನ್ನು ಒದಗಿಸಲಾಗಿದೆ. ಆ ಜನಗಳು ನೀಡಿದ ಆತಿಥ್ಯ ಈ ಜನ್ಮದಲ್ಲಿ ಮರೆಯಲಾಗದ್ದು. ಅಲ್ಲಿ ವರ್ಷದ 6 ತಿಂಗಳು ದಿವ್ಯ ಮಳೆಗಾಲ ವರ್ಷದ 365 ದಿನವೂ ಹಿತವಾದ ಶೀಥಲ ಮಂಜು. ನಾನು ಸ್ವರ್ಗದ ಬಗ್ಗೆ ಕೇಳಿದ್ದೆನಷ್ಟೆ ಅದರೆ ನಿಜವಾಗಿಯೂ ಕಂಡಿದ್ದು ಅಲ್ಲಿ.
-ವಿಶ್ವಾಸ್ ಭಾರದ್ವಾಜ್ (ವಿಭಾ)