ಎಂ.ಎಸ್. ಧೋನಿಯವರ ಕ್ರಿಕೆಟ್ ಭವಿಷ್ಯದ ಬಗ್ಗೆ ಕಿರಣ್ ಮೊರೆ ಹೇಳುವುದು ಹೀಗೆ….!
ಟೀಮ್ ಇಂಡಿಯಾದ ಮಾಜಿ ವಿಕೆಟ್ ಕೀಪರ್ ಹಾಗೂ ಟೀಮ್ ಇಂಡಿಯಾ ಆಯ್ಕೆ ಸಮಿತಿಯ ಮಾಜಿ ಮುಖ್ಯಸ್ಥ ಕಿರಣ್ ಮೊರೆ ಅವರು ರಾಂಚಿ ಹೀರೋ ಮಹೇಂದ್ರ ಸಿಂಗ್ ಧೋನಿ ಅವರ ಬೆಂಬಲಕ್ಕೆ ನಿಂತಿದ್ದಾರೆ. ಮಹೇಂದ್ರ ಸಿಂಗ್ ಧೋನಿ ಫಿಟ್ ಅಗಿದ್ದಾರೆ. ಅವರು ಟೀಮ್ ಇಂಡಿಯಾದಲ್ಲಿ ಮತ್ತೆ ಕಾಣಿಸಿಕೊಂಡ್ರೆ ಉತ್ತಮ ಪ್ರದರ್ಶನ ನೀಡಬಹುದು ಅನ್ನೋ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ಇದು ತುಂಬಾ ಕ್ಲಿಷ್ಟಕರವಾದ ವಿಷ್ಯ. ಆದ್ರೆ ಈ ಬಗ್ಗೆ ಅವರೇ ನಿರ್ಧಾರ ಮಾಡಬೇಕು. ಹಾಗೇ ತುಂಬಾ ಕಠಿಣವಾದದ್ದು. ಸುಲವಾಗಿರುವುದಲ್ಲ. ಮನಸ್ಸು ಒಪ್ಪಿದ್ರೂ ದೇಹ ಸ್ಪಂದಿಸಬೇಕಾಗಿದೆ. ಐಪಿಎಲ್ ಹಿಂದಿನ ವೇಳಾಪಟ್ಟಿಯ ವೇಳೆ ಧೋನಿ ಫಿಟ್ ಅಗಿದ್ದರು. ನಾನು ನೆಟ್ಸ್ ನಲ್ಲಿ ಅವರು ಅಭ್ಯಾಸ ಮಾಡಿರುವುದನ್ನು ನೋಡಿದ್ದೇನೆ. ಅವರು ಸರಾಗವಾಗಿ ಅಭ್ಯಾಸ ಮಾಡುತ್ತಿದ್ದರು. ಟೆನಿಸ್ ನಲ್ಲಿ 34-39 ವಯಸ್ಸಿನ ಆಟಗಾರರು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ನೀವು ಶಿಸ್ತುಬದ್ಧವಾಗಿದ್ದು, ನಿಮ್ಮ ಮನಸ್ಸು ಮತ್ತು ದೇಹ ಸ್ಪಂದಿಸಿದ್ರೆ ಮತ್ತೆ ಕಮ್ ಬ್ಯಾಕ್ ಮಾಡಬಹುದು. ಈ ಹಿಂದೆ ಆಶೀಷ್ ನೆಹ್ರಾ ಕೂಡ ಟೀಮ್ ಇಂಡಿಯಾಗೆ ಕಮ್ ಬ್ಯಾಕ್ ಮಾಡಿ ಉತ್ತಮ ಪ್ರದರ್ಶನ ನೀಡಿದ್ರು ಎಂದು ಕಿರಣ್ ಮೊರೆ ಹೇಳಿದ್ದಾರೆ.
ಈ ಹಿಂದೆ ಧೋನಿ ಐಪಿಎಲ್‍ಗೆ ಎಲ್ಲಾ ರೀತಿಯಲ್ಲೂ ಸನ್ನದ್ಧರಾಗಿದ್ದರು. ಸಿಎಸ್‍ಕೆ ತರಬೇತಿ ಶಿಬಿರದಲ್ಲಿ ಕಠಿಣ ಅಭ್ಯಾಸ ಸಹ ನಡೆಸಿದ್ದರು. ಐಪಿಎಲ್ ನಲ್ಲಿ ಶ್ರೇಷ್ಠ ನಿರ್ವಹಣೆ ನೀಡಿ ಮತ್ತೆ ಟೀಮ್ ಇಂಡಿಯಾದಲ್ಲಿ ಕಾಣಿಸಿಕೊಳ್ಳಬೇಕು ಎಂಬ ಆಸೆಯಲ್ಲಿದ್ದರು. ಆದ್ರೆ ಕೊರೋನಾ ವೈರಸ್‍ನಿಂದಾಗಿ ಐಪಿಎಲ್ ಮತ್ತು ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿಯ ಭವಿಷ್ಯ ತೂಗೂಯ್ಯಾಲೆಯಲ್ಲಿದೆ. ಹೀಗಾಗಿ ಧೋನಿಯ ಕ್ರಿಕೆಟ್ ಭವಿಷ್ಯ ಏನು ಎಂಬುದು ಅವರ ಕೈಯಲ್ಲೇ ಇದೆ.
ಕೆಲವು ದಿನಗಳ ಹಿಂದೆ ಧೋನಿಯವರ ಒಡನಾಡಿ ಹಾಗೂ ಆಪ್ತಮಿತ್ರ ಸುರೇಶ್ ರೈನಾ ಕೂಡ ಧೋನಿಯ ಫಿಟ್‍ನೆಸ್ ಬಗ್ಗೆ ಮಾತನಾಡಿದ್ದರು. ಅಲ್ಲದೆ ಧೋನಿ ಐಪಿಎಲ್‍ಗೆ ಯಾವ ರೀತಿ ಸಿದ್ಧರಾಗಿದ್ದರು ಎಂಬುದನ್ನು ಕೂಡ ಹೇಳಿಕೊಂಡಿದ್ದರು. ನೆಟ್ಸ್ ನಲ್ಲಿ ಧೋನಿ ಸುಮಾರು ಮೂರರಿಂದ ನಾಲ್ಕು ಗಂಟೆಗಳ ತನಕ ಅಭ್ಯಾಸ ಮಾಡುತ್ತಿದ್ದರು. ಹಾಗೇ ಬೆಳಗ್ಗೆ ಜಿಮ್ ನಲ್ಲಿ ಕಸರತ್ತು ನಡೆಸುತ್ತಿದ್ದರು. ಧೋನಿಯ ಮುಖದಲ್ಲಿ ಆಯಾಸ ಎಂಬುದನ್ನು ಕಂಡಿರಲಿಲ್ಲ. ಧೋನಿಯವರ ಪೂರ್ವ ತಯಾರಿ ಭಿನ್ನವಾಗಿತ್ತು ಅಂತ ಸುರೇಶ್ ರೈನಾ ಹೇಳಿದ್ದರು.








