ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಹೋಗೋಣ.. ಯಾರ್ ಗೆಲ್ತಾರೋ ನೋಡೋಣ : ಹುಲಿಯಾ ಸವಾಲ್
ಬೆಂಗಳೂರು : ವಿಧಾನಸಭೆ ವಿಸರ್ಜನೆ ಮಾಡಿ ಜನರ ಮುಂದೆ ಚುನಾವಣೆಗೆ ಹೋಗೋಣ ಆಮೇಲೆ ಯಾರ್ ಗೆಲ್ತಾರೋ ನೋಡೋಣ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಸವಾಲ್ ಹಾಕಿದ್ದಾರೆ.
ವಿಧಾನಸಭೆಯಲ್ಲಿ ಬಜೆಟ್ ಮೇಲೆ ಚರ್ಚೆ ನಡೆಸುತ್ತಿದ್ದ ವೇಳೆ ಸಿದ್ದರಾಮಯ್ಯ ಅವರು ಬಜೆಟ್ ಅನ್ನು ತೀವ್ರವಾಗಿ ಟೀಕಿಸಿದ್ರು. ಇದರಿಂದ ಕೋಪಗೊಂಡ ಸಿಎಂ, ಬೈ ಎಲೆಕ್ಷನ್ ಗೆಲುವಿನ ಬಗ್ಗೆ ಪ್ರಸ್ತಾಪಿಸಿ, ಈ ಬಜೆಟ್ ಮೇಲೆಯೇ ನಾವು ಚುನಾವಣೆಗೆ ಹೋಗುತ್ತೇವೆ.
ನೀವು ಚುನಾವಣೆಗೆ ಬನ್ನಿ, ನಾವೂ ಬರ್ತೇವೆ. ಅಂತಿಮವಾಗಿ ಅಲ್ಲಿ ಗೆದ್ದು ಮತ್ತೆ ಚರ್ಚಿಸೋಣ ಎಂದು ಸಿದ್ದರಾಮಯ್ಯ ಅವರನ್ನ ಕೆಣಕುವಂತೆ ಮಾತನಾಡಿದ್ರು.
ಇದರಿಂದ ಸಿಟ್ಟಿಗೆದ್ದ ಸಿದ್ದರಾಮಯ್ಯ, ಈ ಬೈ ಎಲೆಕ್ಷನ್ ಮಾತು ಬಿಡಿ. ಕೂಡಲೇ ವಿಧಾನಸಭೆ ವಿಸರ್ಜನೆ ಮಾಡಿ ಜನರ ಮುಂದೆ ಚುನಾವಣೆಗೆ ಹೋಗೋಣ, ಆಮೇಲೆ ಯಾರು ಗೆಲ್ತಾರೋ ನೋಡೋಣ ಎಂದು ಸವಾಲ್ ಹಾಕಿದರು.
ಈ ವೇಳೆ ಮಧ್ಯೆ ಪ್ರವೇಶಿಸಿದ ಸ್ಪೀಕರ್ ನೀವು ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಗೊಂದಲವಿದೆ. ನೀವು ಚುನಾವಣೆಗೆ ನಿಲ್ತೀರಾ ಎಂದು ಪ್ರಶ್ನಿಸಿದ್ರು.
ಇದಕ್ಕೆ ಉತ್ತರಿಸಿದ ಸಿದ್ದರಾಮಯ್ಯ, ನಾನು ಎಲ್ಲಿಗೂ ಓಡಿಹೋಗುವುದಿಲ್ಲ. ಮುಂದಿನ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದು ಖಚಿತ. ಈ ಬಗ್ಗೆ ಯಾವುದೇ ಅನುಮಾನ ಬೇಡ ಎಂದು ಹೇಳಿದರು.
ಆಗ ಆರ್ ಅಶೋಕ್ ಎದ್ದುನಿಂತು,ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತೀರಿ ಎಂಬುದನ್ನೂ ಸ್ಪಷ್ಟಪಡಿಸುವಂತೆ ಒತ್ತಾಯಿಸಿದರು. ಆಗ ಸಿದ್ದರಾಮಯ್ಯ, ಬಾದಾಮಿ ಕ್ಷೇತ್ರದಿಂದಲೇ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ.
2018ರಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವುದು ಬೇಡ ಅಂದುಕೊಂಡಿದ್ದೆ. ಆದರೆ ಈಗ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲೇ ಬೇಕು ಎಂಬ ಛಲ ಹೊಂದಿದ್ದೇನೆ.
ಈ ಬಗ್ಗೆ ಯಾವುದೇ ಸಂಶಯಗಳು ಬೇಡ ಬಾದಾಮಿ ಕ್ಷೇತ್ರದಿಂದಲೇ ಮತ್ತೊಮ್ಮೆ ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದು ಘೋಷಿಸಿದ್ದಾರೆ.