ಮೈಸೂರು : ಡಿ.ಕೆ.ಶಿವಕುಮಾರ್ ಅವರ ಮನೆಯ ಮೇಲೆ ಸಿಬಿಐ ದಾಳಿ ಮಾಡಿದ್ದು ರಾಜಕೀಯ ದುರುದ್ದೇಶದಿಂದಲೇ ಹೊರತು ಬೇರಾವುದೇ ಪ್ರಕರಣಗಳ ಹಿನ್ನಲೆಯಲ್ಲಿ ಅಲ್ಲ ಎಂದು ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಕಾಂಗ್ರೆಸ್ ಪಕ್ಷದ ಮುಖಂಡರ ಮೇಲೆ ಮಾತ್ರ ದಾಳಿ ಮಾಡುತ್ತಿರುವ ಸಿಬಿಐ ಯಾಕೆ ಬಿಜೆಪಿಯವರ ಮೇಲೆ ದಾಳಿ ಮಾಡುತ್ತಿಲ್ಲ. ಕಾಂಗ್ರೆಸ್ ಪಕ್ಷದವರು ಮಾತ್ರ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ.. ಅಕ್ರಮದಲ್ಲಿ ತೊಡಗಿದ್ದಾರೆ ಎಂಬುದಾಗಿ ಸಿಬಿಐ ದಾಳಿ ನಡೆಸುತ್ತಿದೆಯಲ್ಲಾ.. ಯಾಕೆ ಬಿಜೆಪಿಯವರು ಭ್ರಷ್ಟಾಚಾರ, ಅಕ್ರಮ ಹಣ ಸಂಪಾದನೆಯನ್ನೇ ಮಾಡ್ತಾ ಇಲ್ವಾ ಎಂದು ಕಿಡಿಕಾರಿದ್ರು.
ಮುಂದುವರಿದು ಬಿಜೆಪಿ ವಿರುದ್ಧ ಕಿಡಿಕಾರಿದ ಸಿದ್ದರಾಮಯ್ಯ, ಬಿಜೆಪಿಯವರು ಹೇಳೋದು ಬರೀ ವೇದಾಂತ ಅಷ್ಟೇ.. ಉಪ ಚುನಾವಣೆಯ ಸಂದರ್ಭದಲ್ಲಿಯೇ ಡಿ.ಕೆ. ಶಿವಕುಮಾರ್ ಮನೆಯ ಮೇಲೆ ಸಿಬಿಐ ದಾಳಿ ಮಾಡಿದ್ದು ರಾಜಕೀಯ ದುರುದ್ದೇಶದಿಂದಲೇ ಆಗಿದೆ. ಉಪ ಚುನಾವಣೆ ಸಂದರ್ಭದಲ್ಲಿಯೇ ಕಾಂಗ್ರೆಸ್ ನಾಯಕರನ್ನು ಯಾಕೆ ಟಾರ್ಗೆಟ್ ಮಾಡಬೇಕು ಎಂದು ಪ್ರಶ್ನಿಸಿದರು.








