Laxman Savadi: ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಕಾರು ಅಪಘಾತ…
ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರ ಕಾರು ಬೆಳಗಾವಿ ಜಿಲ್ಲೆ ರಾಯಭಾಗ ತಾಲೂಕಿನ ಹಾರೂಗೇರಿ ಕ್ರಾಸ್ ಬಳಿ ಪಲ್ಟಿ ಆಗಿದ್ದು, ಸವದಿ ಅವರು ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ.
ಘಟನೆಯಲ್ಲಿ ಲಕ್ಷ್ಮಣ ಸವದಿ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ರಾಯಬಾಗ ತಾಲೂಕಿನ ಹಾರೋಗೇರಿ ಪಟ್ಟಣದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ರಸ್ತೆ ಬದಿಗೆ ಪಲ್ಟಿಯಾಗಿ ಬಿದ್ದಿದೆ. ಕಾರಿನಲ್ಲಿದ್ದ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಹಾಗೂ ಇತರ ನಾಲ್ವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.
ಬುಧವಾರ ಮಧ್ಯಾಹ್ನ ಅಥಣಿಯಿಂದ ಗೋಕಾಕ್ ಮಾರ್ಗವಾಗಿ ಸಂಚರಿಸುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ರಸ್ತೆ ಮಧ್ಯೆ ಬೈಕ್ ಸವಾರರು ಏಕಾಏಕಿ ಎದುರಿಗೆ ಬಂದಾಗ, ಅಪಘಾತ ತಪ್ಪಿಸಲು ಹೋಗಿ ಕಾರು ನಿಯಂತ್ರಣ ತಪ್ಪಿ ಘಟಪ್ರಭಾ ಎಡದಂಡೆ ಕಾಲುವೆಗೆ ಪಲ್ಟಿಯಾಗಿದೆ.
ಈ ವೇಳೆ ಸ್ಥಳೀಯರ ಸಹಾಯದಿಂದ ಕಾರನ್ನು ಮೇಲಕ್ಕೆ ಎತ್ತಲಾಗಿದೆ. ಕಾರಿನಲ್ಲಿ ಸಿಲುಕಿದ್ದ ಲಕ್ಷ್ಮಣ ಸವದಿ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಹಾರೋಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅವಘಡ ನಡೆದಿದೆ.








