ಮಾಜಿ ಕೇಂದ್ರ ಸಚಿವ ಜಸ್ವಂತ್ ಸಿಂಗ್ ನಿಧನ
ಮಾಜಿ ಕೇಂದ್ರ ಸಚಿವ ಹಾಗೂ ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ ಜಸ್ವಂತ್ ಸಿಂಗ್ ಅವರು ನಿಧನರಾಗಿದ್ದಾರೆ. ಅಟಲ್ ಬಿಹಾರಿ ವಾಜಪೇಯಿ ಸರ್ಕಾರದ ಅವಧಿಯಲ್ಲಿ ಜಸ್ವಂತ್ ಸಿಂಗ್ ಅವರು ಕೇಂದ್ರದಲ್ಲಿ ರಕ್ಷಣಾ ಮತ್ತು ಆರ್ಥಿಕ ಹಾಗೂ ವಿದೇಶಾಂಗ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ.
ಜಸ್ವಂತ್ ಸಿಂಗ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜ್‍ನಾಥ್ ಸಿಂಗ್ ಸೇರಿದಂತೆ ಪ್ರಮುಖ ನಾಯಕರು ಸಂತಾಪ ಸೂಚಿಸಿದ್ದಾರೆ.
ಜಸ್ವತ್ ಸಿಂಗ್ ಅವರು ಹುಟ್ಟಿದ್ದು ಜನವರಿ 3, 1938ರಲ್ಲಿ. ನಿವೃತ್ತ ಮಿಲಿಟರಿ ಅಧಿಕಾರಿಯಾಗಿದ್ದ ಜಸ್ವಂತ್ ಸಿಂಗ್ ಅವರು ಭಾರತೀಯ ಜನತಾ ಪಕ್ಷದ ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿದ್ದರು. 1980ರಿಂದ 2014ರ ರಾಜ್ಯಸಭೆ ಮತ್ತು ಸಂಸತ್ ಸದಸ್ಯರಾಗಿದ್ದರು.
1980, 1986, 1998, 1999 ಮತ್ತು 2004ರಲ್ಲಿ ರಾಜ್ಯ ಸಭಾ ಸದಸ್ಯರಾಗಿದ್ದರು. ಅಲ್ಲದೆ ನಾಲ್ಕು ಬಾರಿ ಸಂಸತ್ ಸದಸ್ಯ ರಾಗಿದ್ದರು. 1990, 1991, 1996 ಮತ್ತು 2009ರಲ್ಲಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು.
2014 ಆಗಸ್ಟ್ 7 ರಂದು ಅವರು ಬಾತ್ ರೂಮ್ ನಲ್ಲಿ ಬಿದ್ದ ಕಾರಣ ಅವರ ತಲೆಗೆ ತೀವ್ರ ಗಾಯವಾಗಿತ್ತು. ದೆಹಲಿಯ ಆರ್ಮಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ರೂ ಅವರು ಕೋಮಾಗೆ ಜಾರಿದ್ರು. ಒಟ್ಟಾರೆ ಐದು ವರ್ಷಗಳ ಕಾಲ ಕೋಮಾದಲ್ಲಿದ್ದ ಜಸ್ವಂತ್ ಸಿಂಗ್ ಅವರು ತಮ್ಮ 82ನೇ ವಯಸ್ಸಿನಲ್ಲಿ ವಿಧಿವಶರಾಗಿದ್ದಾರೆ.
ರಾಜಸ್ತಾನದ ರಜಪೂತ್ ಕುಟುಂಬದಲ್ಲಿ ಜನಿಸಿರುವ ಜಸ್ವಂತ್ ಸಿಂಗ್ ಅವರು ಭಾರತೀಯ ಜನತಾ ಪಕ್ಷದ ಬೆನ್ನುಲಬಾಗಿದ್ದರು. ಆದ್ರೆ 2014ರಲ್ಲಿ ಅವರಿಗೆ ಬಿಜೆಪಿ ಪಕ್ಷದಿಂದ ಟಿಕೇಟ್ ನೀಡದ ಕಾರಣ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಬಾರ್ಮೆರ್ ಲೋಕ ಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಬಳಿಕ ಬಿಜೆಪಿ ಪಕ್ಷದಿಂದ ಅವರನ್ನು ಉಚ್ಛಾಟನೆ ಮಾಡಲಾಗಿತ್ತು.








