ಉತ್ಪಾಲ್ ಪರಿಕ್ಕರ್ ಮಾರ್ಗದಲ್ಲಿ ಪರ್ಸೇಕರ್.. ಬಿಜೆಪಿಗೆ ಮಾಜಿ ಸಿಎಂ ರಾಜೀನಾಮೆ
ಪಣಜಿ : ಗೋವಾ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಬಿಜೆಪಿಯಲ್ಲಿ ಅಲ್ಲೋಲ ಕಲ್ಲೋಲವಾಗುತ್ತಿದೆ.
ಮೊನ್ನೆಯಷ್ಟೆ ಟಿಕೆಟ್ ನಿರಾಕರಿಸಿದ್ದಕ್ಕೆ ಗೋವಾ ಮಾಜಿ ಸಿಎಂ ಮನೋಹರ್ ಪರಿಕ್ಕರ್ ಪುತ್ರ ಉತ್ಪಾಲ್ ಪರಿಕ್ಕರ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು.
ಇದೀಗ ಅವರ ಹಾದಿಯಲ್ಲಿಯೇ ಗೋವಾ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿಯ ಹಿರಿಯ ನಾಯಕ ಲಕ್ಷ್ಮೀಕಾಂತ್ ಪರ್ಸೇಕರ್ ಅವರು ಬಿಜೆಪಿ ಸದಸ್ಯತ್ವಕ್ಕೆ ಶನಿವಾರ ರಾಜೀನಾಮೆ ನೀಡಿದ್ದಾರೆ.
ಗೋವಾ ವಿಧಾನಸಭಾ ಚುನಾವಣೆಗೆ ಬಿಜೆಪಿ ಹೈಕಮಾಂಡ್ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಈ ಪಟ್ಟಿಯಲ್ಲಿ ಪರ್ಸೆಕರ್ ಹೆಸರಿಲ್ಲದ ಕಾರಣ, ಬಿಜೆಪಿ ಗೋವಾ ಅಧ್ಯಕ್ಷ ಸದಾನಂದ್ ತಾನಾವ್ಡೆ ಅವರಿಗೆ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ.
ಅಲ್ಲದೇ ಕೂಡಲೇ ತಮ್ಮ ರಾಜೀನಾಮೆಯನ್ನು ಅಂಗೀಕರಿಸಿ, ತಮ್ಮನ್ನ ಪಕ್ಷದ ಎಲ್ಲಾ ಚಟುವಟಿಕೆಗಳಿಗೆ ಸಂಬಂಧಿಸಿದ ಜವಾಬ್ದಾರಿಗಳಿಂದ ಮುಕ್ತಗೊಳಿಸುವಂತೆ ಮನವಿ ಮಾಡಿಕೊಂಡಿದ್ದಾರೆ.
ಅಂದಹಾಗೆ ಮನೋಹರ್ ಪರಿಕ್ಕರ್ ಅವರು ಕೇಂದ್ರ ರಕ್ಷಣಾ ಸಚಿವರಾಗಿ ನೇಮಕವಾದ ಬಳಿಕ ತೆರವಾದ ಸಿಎಂ ಹುದ್ದೆಗೆ ಬಿಜೆಪಿ ಹೈಕಮಾಂಡ್ ಪರ್ಸೇಕರ್ ಅವರನ್ನು ಆಯ್ಕೆ ಮಾಡಿತ್ತು. ಪರ್ಸೇಕರ್ ಅವರು 2014ರಿಂದ 2017ರವರೆಗೆ ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸಿದ್ದರು.









