ಧನ್ಯವಾದಗಳು… ರಿಚರ್ಡ್ ಹ್ಯಾಡ್ಲಿ ದಾಖಲೆ ಅಳಿಸಿ ಹೋಯ್ತು…. ಮುಂದೆ ಏನು… ? ಹೀಗೆ ಕಪಿಲ್ ಬಳಿ ಗಾಯಕ್‍ವಾಡ್ ಹೇಳಿದ್ಯಾಕೆ..?
ಕಪಿಲ್ ದೇವ್.. ಈ ಹೆಸರು ಕೇಳಿದ ತಕ್ಷಣ ನೆನಪಾಗೋದು 1983ರ ವಿಶ್ವಕಪ್. ಜಿಂಬಾಬ್ವೆ ವಿರುದ್ಧದ ಅಜೇಯ 175 ರನ್ ಹಾಗೂ ಲಾಡ್ರ್ಸ್ ಅಂಗಣದ ಬಾಲ್ಕನಿಯಲ್ಲಿ ವಿಶ್ವಕಪ್ ಟ್ರೋಫಿ ಹಿಡಿದಿದ್ದ ಕ್ಷಣ ಒಂದು ಘಳಿಗೆ ಕಣ್ಣ ಮುಂದೆ ಹಾದು ಹೋಗುತ್ತದೆ.
ಕಪಿಲ್ ದೇವ್ ಭಾರತ ಕ್ರಿಕೆಟ್ ತಂಡದ ಅದ್ಭುತ ಆಲ್ ರೌಂಡರ್. ನಿಖರವಾದ ಬೌಲಿಂಗ್ ಜೊತೆ ಬೀಸು ಹೊಡೆತಕ್ಕೂ ಕಪಿಲ್ ಪ್ರಖ್ಯಾತಿಯನ್ನು ಪಡೆದಿದ್ದರು. ಹಾಗೇ ವಿಶ್ವ ಕ್ರಿಕೆಟ್ ನಲ್ಲಿ ರಿಚರ್ಡ್ ಹ್ಯಾಡ್ಲಿ ಅವರ ಗರಿಷ್ಠ ವಿಕೆಟ್ ದಾಖಲೆಯನ್ನು ಅಳಿಸಿ ಹಾಕಿದ್ದರು. 1994ರಲ್ಲಿ ಶ್ರೀಲಂಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಹಸನ್ ತಿಲಕ್‍ರತ್ನೆ ಅವರ ವಿಕೆಟ್ ಪಡೆಯುವ ಮೂಲಕ ಕಪಿಲ್ ಈ ಸಾಧನೆ ಮಾಡಿದ್ದರು. ಇದೀಗ ಗರಿಷ್ಠ ವಿಕೆಟ್ ಪಡೆದ ದಾಖಲೆ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಹೆಸರಿನಲ್ಲಿದೆ.
ಅಂದ ಹಾಗೇ ಕಪಿಲ್ ದೇವ್ 1994ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದರು. ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ 2 ವಿಕೆಟ್ ಕಬಳಿಸಿ ತನ್ನ ವರ್ಣ ರಂಜಿತ ಕ್ರಿಕೆಟ್ ಬದುಕಿಗೆ ಅರ್ಥಪೂರ್ಣ ವಿದಾಯ ಹೇಳಿದ್ದರು. ಇದೀಗ ಭಾರತ ಕ್ರಿಕೆಟ್ ನ ಮಾಜಿ ಆಯ್ಕೆ ಸಮಿತಿಯ ಸದಸ್ಯರಾಗಿದ್ದ ಆಂಶುಮಾನ್ ಗಾಯಕ್‍ವಾಡ್ ಕಪಿಲ್ ದೇವ್ ಅವರ ವಿದಾಯದ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ.
ಕಪಿಲ್ ತನ್ನ ಕ್ರಿಕೆಟ್ ಬದುಕಿನ ಕೊನೆಯ ದಿನಗಳಲ್ಲಿ ಅಷ್ಟೊಂದು ಉತ್ತಮ ಫಾರ್ಮ್‍ನಲ್ಲಿರಲಿಲ್ಲ. ಆದ್ರೆ ಅವರ ಮುಂದೆ ರಿಚರ್ಡ್ ಹ್ಯಾಡ್ಲಿಯವರ ದಾಖಲೆಯನ್ನು ಅಳಿಸಿ ಹಾಕುವಂತಹ ಅವಕಾಶಗಳು ಇದ್ದವು. ಹಾಗಾಗಿ ಆಯ್ಕೆ ಸಮಿತಿಯು ಕಪಿಲ್ ನಿವೃತ್ತಿಗಾಗಿ ಹೆಚ್ಚಿನ ಒತ್ತಡವನ್ನು ಹೇರುತ್ತಿರಲಿಲ್ಲ. ಆದ್ರೆ ಹ್ಯಾಡ್ಲಿ ಅವರ ದಾಖಲೆ ಅಳಿಸಿ ಹಾಕಿದ ನಂತರ ಕಪಿಲ್ ದೇವ್ ಬಳಿ ನಾನು ಮತ್ತು ಮತ್ತೊಬ್ಬ ಆಯ್ಕೆ ಸಮಿತಿ ಸದಸ್ಯ ಜಿ.ಆರ್. ವಿಶ್ವನಾಥ್ ಏನು ಹೇಳಿದ್ದೇವು ಎಂಬುದನ್ನು ಅಂಶುಮಾನ್ ಗಾಯಕ್‍ವಾಡ್ ಸ್ಮರಿಸಿಕೊಂಡಿದ್ದಾರೆ.
ಕಪಿಲ್‍ದೇವ್ ಅವರು ಅಹಮದಾಬಾದ್‍ನಲ್ಲಿ ರಿಚರ್ಡ್ ಹ್ಯಾಡ್ಲಿಯವರ ದಾಖಲೆಯನ್ನು ಅಳಿಸಿ ಹಾಕಿದ್ದರು. ಆಗ ನಾನು ಮತ್ತು ವಿಶಿ ಕಪಿಲ್ ದೇವ್ ಬಳಿ ಮಾತನಾಡಿದ್ದೇವು. ಧನ್ಯವಾದಗಳು. ನೀವು ಹಾಡ್ಲಿ ಅವರ ದಾಖಲೆಯನ್ನು ಅಳಿಸಿ ಹಾಕಿದ್ದೀರಿ. ಆದ್ರೆ ಮುಂದೆ ಏನು ? ಹೀಗೆ ಹೇಳಿದಾಗ ಯಾರಿಗೂ ಮುಜುಗರ ಆಗುವುದಿಲ್ಲ. ನಾವು ಈ ರೀತಿ ಕಪಿಲ್ ಜೊತೆ ಮಾತನಾಡಿದ್ದೇವು ಅಂತ ಹೇಳಿಕೊಂಡಿದ್ದಾರೆ ಅಂಶುಮಾನ್ ಗಾಯಕ್‍ವಾಡ್
ಆಯ್ಕೆಗಾರ ಜವಾಬ್ದಾರಿ ಹೇಗಿರಬೇಕು ಎಂಬುದರ ಬಗ್ಗೆ ಮಾತನಾಡಿದ್ದ ಅಂಶುಮಾನ್ ಗಾಯಕ್‍ವಾಡ್, ಆಟಗಾರನಾಗಿ ಮತ್ತು ಆಯ್ಕೆಗಾರನಾಗಿ ನಿಮ್ಮ ಅನುಭವ ಹೇಗಿರಬೇಕು ಅಂದ್ರೆ ದೂರದೃಷ್ಟಿ ಇರಬೇಕು. ದೇಸಿ ಪಂದ್ಯಗಳ ಸಾಧನೆ ಮತ್ತು ಅಂಕಿ ಅಂಶಗಳ ಆಧಾರದ ಮೇಲೆ ಹೋಗಬಾರದು. ಆತ ವಿಕೆಟ್ ಗಳಿಸಿದ್ದಾನೋ, ಅಥವಾ ಆ ಮಟ್ಟದಲ್ಲಿ ಯಶ ಸಾಧಿಸಿದ್ದಾನೋ ಅನ್ನೋದನ್ನು ಆಯ್ಕೆಗಾರರು ಅರ್ಥಮಾಡಿಕೊಳ್ಳಬೇಕು. ಇದನ್ನು ಆ ಮಟ್ಟದಲ್ಲಿ ಬೆಳೆದವರಿಗೆ ಮಾತ್ರ ತಿಳಿದುಕೊಳ್ಳಲು ಸಾಧ್ಯ ಎಂದು ಅವರು ಹೇಳಿದ್ರು.








