ಇಂದು ಬಿಜೆಪಿ ಸೇರಲಿರುವ ಮಾಜಿ ಐಪಿಎಸ್ ಅಧಿಕಾರಿ ಕೆ ಅಣ್ಣಾಮಲೈ
ಚೆನ್ನೈ, ಅಗಸ್ಟ್25: ಕರ್ನಾಟಕದ ಸಿಂಗಮ್ ಎಂದೇ ಹೆಸರು ಮಾಡಿದ್ದ ಮಾಜಿ ಐಪಿಎಸ್ ಅಧಿಕಾರಿ ಕೆ ಅಣ್ಣಾಮಲೈ ಇಂದು ಬಿಜೆಪಿ ಸೇರಲಿದ್ದಾರೆ. ಸುಮಾರು ಒಂದು ದಶಕ ಕಾಲ ಕರ್ನಾಟಕದಲ್ಲಿ ಸೇವೆ ಸಲ್ಲಿಸಿದ್ದ ಅಣ್ಣಾಮಲೈ ಅವರು 2019 ರ ಮೇ28ರಂದು ಸೇವೆಗೆ ರಾಜೀನಾಮೆ ನೀಡಿದ್ದರು.

39 ವರ್ಷದ ಮಾಜಿ ಐಪಿಎಸ್ ಅಧಿಕಾರಿ ನವದೆಹಲಿಯಲ್ಲಿ ಇಂದು ಬೆಳಿಗ್ಗೆ 11 ಗಂಟೆಗೆ ಬಿಜೆಪಿಯನ್ನು ಅಧ್ಯಕ್ಷ ಜೆ ಪಿ ನಡ್ಡಾ ಅವರ ಸಮ್ಮುಖದಲ್ಲಿ ಸೇರಿಕೊಳ್ಳಲಿದ್ದಾರೆ.
ತಾನು ಬಿಜೆಪಿಗೆ ಸೇರುತ್ತಿರುವುದಾಗಿ ಹೇಳಿರುವ ಅವರು ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಅವರ ಮೆಚ್ಚುಗೆಯೇ ಈ ನಿರ್ಧಾರ ತೆಗೆದುಕೊಳ್ಳಲು ಕಾರಣವಾಯಿತು ಎಂದು ಹೇಳಿದ್ದಾರೆ.

ವೈದ್ಯಕೀಯ ಸಚಿವ ಕೆ. ಸುಧಾಕರ್, ಈ ಬಗ್ಗೆ ಟ್ವೀಟ್ ಮಾಡಿ ಮಾಹಿತಿ ನೀಡಿದ್ದು, ಕರ್ನಾಟಕ ಕೇಡರ್‌ನ ನಿವೃತ್ತಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಇಂದು ದೆಹಲಿಯಲ್ಲಿ ಬಿಜೆಪಿ ಸೇರಲಿದ್ದಾರೆ. ಚಿಕ್ಕಮಗಳೂರು ಸೇರಿದಂತೆ ಹಲವೆಡೆ ದಕ್ಷತೆಯಿಂದ ಕಾರ್ಯನಿರ್ವಹಿಸಿ ಸ್ವಯಂ ನಿವೃತ್ತಿ ಪಡೆದು ಬಿಜೆಪಿ ಸೇರುತ್ತಿದ್ದಾರೆ. ಅವರು ಬಿಜೆಪಿ ಸೇರುತ್ತಿರುವುದು ನನಗೆ ಅತೀವ ಸಂತೋಷ ತಂದಿದೆ.ಅವರಿಗೆ ಹೃದಯಪೂರ್ವಕ ಸ್ವಾಗತ ಎಂದಿದ್ದಾರೆ.

ಸಾಮಾಜಿಕ ಬದಲಾವಣೆಗಿಂತ ರಾಜಕೀಯ ಬದಲಾವಣೆ ಮುಖ್ಯ ಎಂದು ನಾನು ಭಾವಿಸುತ್ತೇನೆ ಮತ್ತು ಅದಕ್ಕಾಗಿಯೇ ನಾನು ಈಗ ರಾಜಕೀಯಕ್ಕೆ ಧುಮುಕಲು ನಿರ್ಧರಿಸಿದ್ದೇನೆ ಎಂದು ಅಣ್ಣಾಮಲೈ ಹೇಳಿದ್ದಾರೆ.








