ಮಾಜಿ ಸಂಸದ ಎಚ್ ಬಿ ಪಾಟೀಲ ನಿಧನ Saaksha Tv
ಬಾಗಲಕೋಟೆ: ಮಾಜಿ ಸಂಸದ ಎಚ್ ಬಿ ಪಾಟೀಲ ಮಂಗಳವಾರ ಚಿಕಿತ್ಸೆ ಫಲಕಾರಿಯಾಗದೆ ಬಾಕಲಕೋಟೆ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.
ಕಾಂಗ್ರೆಸ್ ಪಕ್ಷದ ಸಂಸತ್ ಸದಸ್ಯರಾಗಿದ್ದ 80 ವರ್ಷದ ಹನುಮಂತ ಗೌಡ ಭೀಮನಗೌಡ ಪಾಟೀಲ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಹೀಗಾಗಿ ಇವರನ್ನು ಬಾಗಲಕೋಟೆಯ ಖಾಸಗಿ ಅಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದರು.
ಸಂಸದರು ಪತ್ನಿ, ಐವರು ಹೆಣ್ಣುಮಕ್ಕಳು ಹಾಗೂ ಒಬ್ಬ ಮಗನನ್ನು ಅಗಲಿದ್ದಾರೆ. ಮಗ ಡಾ ಭೀಮನಗೌಡ ಪಾಟಿಲ್ ನ್ಯೂರೋಲಾಜಿಸ್ಟ್ ಆಗಿದ್ದು, ಲಂಡನ್ ನಲ್ಲಿ ನೆಲೆಸಿದ್ದಾರೆ. ಅವರ ಅಂತಿಮ ಸಂಸ್ಕಾರ ಬುಧವಾರ ಮಧ್ಯಾಹ್ನ 12 ಗಂಟೆಗೆ ಬಾದಾಮಿ ತಾಲೂಕಿನಲ್ಲಿರುವ ರಡ್ಡೇರ ತಿಮ್ಮಾಪುರ ಗ್ರಾಮದಲ್ಲಿ ನಡೆಯಲಿದೆ.
ಇವರು 1942ರ ಮಾರ್ಚ್ 29ರಂದು ಜನಿಸಿದ ಎಚ್.ಬಿ. ಪಾಟೀಲ ಅವರು ಸ್ವಗ್ರಾಮದಲ್ಲಿ ಪ್ರಾಥಮಿಕ, ರಾಮದುರ್ಗದಲ್ಲಿ ಮಾಧ್ಯಮಿಕ ಶಿಕ್ಷಣ ಪಡೆದು, ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿಎ, ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ರಾಜ್ಯಶಾಸ್ತ್ರ ಸ್ನಾತಕೋತ್ತರ (ಎಂಎ) ಪದವಿ ಪಡೆದಿದ್ದರು. ಶಿಕ್ಷಣ ನಂತರ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡಿದ್ದರು. ನಂತರ ಸ್ನೇಹಿತರ ಒತ್ತಾಯಕ್ಕೆ ಮಣಿದು ಬದಾಮಿ ತಾಲೂಕು ಬೋರ್ಡ್ ಚುನಾವಣೆಗೆ ಸ್ಪರ್ಧಿಸಿ ಗೆಲವು ಸಾಧಿಸುವ ಮೂಲಕ ರಾಜಕೀಯ ಪ್ರವೇಶಿಸಿದರು.
ಪಾಟೀಲರು 1984-89 ರ ಆವಧಿಗೆ ಬಾಗಲಕೋಟೆಯ ಸಂಸದರಾಗಿದ್ದರು. ಇಂದಿರಾ ಗಾಂಧಿಯವರು ಭಯೋತ್ಪಾದಕರ ಗುಂಡಿಗೆ ಬಲಿಯಾದ ನಂತರ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ದಾಖಲೆಯ 414 ಕ್ಷೇತ್ರಗಳನ್ನು ಗೆದ್ದು ಅಧಿಕಾರಕ್ಕೆ ಬಂದಾಗ ಪಾಟೀಲ ಅವರು ಬಾಗಲಕೋಟೆಯಿಂದ ಸಂಸತ್ತಿಗೆ ಆಯ್ಕೆಯಾಗಿದ್ದರು.
ತಮ್ಮ ಅವಧಿಯಲ್ಲಿ ವಿಜಯಪುರ ಜಿಲ್ಲೆಯ ನಂದಿ ರೈತರ ಸಹಕಾರಿ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಲೈಸೆನ್ಸ್ ದೊರಕಿಸಿಕೊಟ್ಟರು ಮತ್ತು ಬಾಗಲಕೋಟೆ ತಾಲ್ಲೂಕಿನ ಗದ್ದನಕೇರಿ ನೂಲಿನ ಗಿರಣಿ ಚೇರ್ಮನ್ ಆಗಿ ಸೇವೆ ಸಹ ಸಲ್ಲಿಸಿದ್ದರು. ಹಲವಾರು ಜನರಿಗೆ ಸಂಘ ಸಂಸ್ಥೆಗಳಿಗೆ ಮಾರ್ಗದರ್ಶಿಗಳಾಗಿದ್ದ ಪಾಟೀಲ್ ಅವರ ನಿಧನದಿಂದ ಬಾಗಲಕೋಟೆ ಜಿಲ್ಲೆ ಬಡವಾಗಿದೆ ಅಂತ ಜನ ಮಾತಾಡಿಕೊಳ್ಳುತ್ತಿದ್ದಾರೆ.