ಕೈತಪ್ಪಿದ ಟಿಕೆಟ್ – ಮಾಜಿ ಸಂಸದ ಮುದ್ದಹನುಮೇಗೌಡ ತೀವ್ರ ಅಸಮಾಧಾನ
ಬೆಂಗಳೂರು, ಜೂನ್ 18: ಮಾಜಿ ಸಂಸದ ಮುದ್ದಹನುಮೇಗೌಡ ಕಾಂಗ್ರೆಸ್ನಲ್ಲಿ ಮತ್ತೆ ಟಿಕೆಟ್ ತಪ್ಪಿದ ಹಿನ್ನೆಲೆಯಲ್ಲಿ ಪಕ್ಷದ ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇವರು ಹೈಕಮಾಂಡ್ ನೀಡಿದ್ದ ಭರವಸೆಯ ಹಿನ್ನೆಲೆಯಲ್ಲಿ ವಿಧಾನಪರಿಷತ್ ಟಿಕೆಟ್ ಆಕಾಂಕ್ಷಿಯಾಗಿದ್ದರಂತೆ. ಆದರೆ ಇವರಿಗೆ ಇದೀಗ ಪರಿಷತ್ ಟಿಕೆಟ್ ಕೈ ತಪ್ಪಿ ಹೋಗಿದ್ದು, ರಾಜ್ಯದ ಕಾಂಗ್ರೆಸ್ ನಾಯಕರು ಹೈಕಮಾಂಡ್ ಗೆ ನಿಜಸ್ಥಿತಿಯನ್ನು ತಿಳಿಸುವ ಪ್ರಯತ್ನ ಮಾಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿರುವ ಮಾಜಿ ಸಂಸದ ಮುದ್ದಹನುಮೇಗೌಡ ನಾನು ಕ್ಷೇತ್ರವನ್ನು ತ್ಯಾಗ ಮಾಡಿದ್ದರೂ ನನ್ನ ಹೆಸರನ್ನು ಪ್ರಸ್ತಾಪ ಮಾಡದೆ ತಮಗೆ ಬೇಕಾದವರನ್ನು ಬೆಂಬಲಿಸಿದರು ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಳೆದ ಲೋಕಸಭಾ ಚುನಾವಣೆ ವೇಳೆ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸೂತ್ರದಂತೆ ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರಿಗೆ ಅನಿವಾರ್ಯವಾಗಿ ಮುದ್ದಹನುಮೇಗೌಡ ಅವರು ತಮ್ಮ ಕ್ಷೇತ್ರವನ್ನು ತ್ಯಾಗ ಮಾಡಬೇಕಾಗಿ ಬಂದಿತ್ತು. ಆ ಸಂದರ್ಭದಲ್ಲಿ ಕಾಂಗ್ರೆಸ್ ಹೈಕಮಾಂಡ್ ಮುದ್ದಹನುಮೇಗೌಡ ಅವರಿಗೆ ರಾಜ್ಯಸಭಾ ಟಿಕೆಟ್ ನ ಭರವಸೆ ನೀಡಿದ್ದು, ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅವಕಾಶ ನೀಡಿದ ಕಾರಣ ಇದೀಗ ಮುದ್ದಹನುಮೇಗೌಡ ಮತ್ತೊಮ್ಮೆ ಟಿಕೆಟ್ ವಂಚಿತರಾಗಿದ್ದಾರೆ.

ವಿಧಾನಪರಿಷತ್ ಟಿಕೆಟ್ ತಮಗೆ ಸಿಕ್ಕೇ ಸಿಗುತ್ತದೆ ಎಂದು ಆಕಾಂಕ್ಷೆ ಹೊಂದಿದ್ದ ಮುದ್ದಹನುಮೇಗೌಡ ಅವರು ಟಿಕೆಟ್ ಕೈ ತಪ್ಪಿದಕ್ಕೆ ತೀವ್ರ ನಿರಾಶೆ ಹೊಂದಿದ್ದು, ಪಕ್ಷದಲ್ಲಿ ಯಾವ ನಿರೀಕ್ಷೆಯನ್ನೂ ಇಟ್ಟುಕೊಳ್ಳಲು ಸಾಧ್ಯವಿಲ್ಲದ ಪರಿಸ್ಥಿತಿ ಬಂದಿದೆ. ಮನಸ್ಸಿಗೆ ಆಗಿರುವ ನೋವಿನಿಂದ ಮೊದಲು ಹೊರ ಬರಬೇಕಿದೆ. ಈಗ ನಾನು ಏನನ್ನೂ ಮಾತನಾಡಲು ಬಯಸುವುದಿಲ್ಲ ಎಂದು ಹೇಳಿದ್ದಾರೆ.








