ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಆರೋಗ್ಯ ಯಥಾಸ್ಥಿತಿ ಮುಂದುವರಿಕೆ
ಹೊಸದಿಲ್ಲಿ, ಅಗಸ್ಟ್ 18: ವೆಂಟಿಲೇಟರ್ ಬೆಂಬಲದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಸ್ಥಿತಿಯಲ್ಲಿ ಯಾವುದೇ ಸುಧಾರಣೆ ಕಂಡು ಬಂದಿಲ್ಲ ಎಂದು ಸೇನೆಯ ಸಂಶೋಧನಾ ಮತ್ತು ರೆಫರಲ್ ಆಸ್ಪತ್ರೆ ಮಂಗಳವಾರ ತಿಳಿಸಿದೆ. ತಜ್ಞ ವೈದ್ಯರು ಅವರ ಆರೋಗ್ಯದ ಮೇಲೆ ನಿಗಾವಹಿಸಿದ್ದು, ದೇಹದಲ್ಲಿನ ರಕ್ತ ಚಲನೆ ಸ್ಥಿರವಾಗಿದೆ ಎಂದು ವೈದ್ಯರು ಹೇಳಿದ್ದಾರೆ.

84 ವರ್ಷದ ಮಾಜಿ ರಾಷ್ಟ್ರಪತಿಯವರನ್ನು ಆಗಸ್ಟ್ 10 ರಂದು ದೆಹಲಿ ಕಂಟೋನ್ಮೆಂಟ್‌ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೆದುಳಿನಲ್ಲಿ ಹೆಪ್ಪುಗಟ್ಟಿದ ರಕ್ತವನ್ನು ತೆಗೆದುಹಾಕಲು ಅವರಿಗೆ ಶಸ್ತ್ರಚಿಕಿತ್ಸೆ ಮಾಡಲಾಯಿತು ಮತ್ತು ಅಂದಿನಿಂದ ಅವರು ಕೋಮಾದಲ್ಲಿದ್ದಾರೆ. ಅಲ್ಲದೆ ಅವರಿಗೆ ಕೋವಿಡ್-19 ಸೋಂಕು ಕೂಡ ದೃಢಪಟ್ಟಿದೆ.

ಶ್ರೀ ಪ್ರಣಬ್ ಮುಖರ್ಜಿ ಅವರ ವೈದ್ಯಕೀಯ ಸ್ಥಿತಿಯಲ್ಲಿ ಯಾವುದೇ ಬದಲಾವಣೆ ಇಲ್ಲ. ಅವರಿಗೆ ವೆಂಟಿಲೇಟರ್ ನೆರವಿನೊಂದಿಗೆ ಚಿಕಿತ್ಸೆ ಮುಂದುವರಿಸಲಾಗಿದೆ ಮತ್ತು ಅವರ ಪ್ರಮುಖ ನಿಯತಾಂಕಗಳು ಸ್ಥಿರವಾಗಿವೆ ಎಂದು ಆಸ್ಪತ್ರೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.








