ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಆರೋಗ್ಯದಲ್ಲಿ ಸ್ವಲ್ಪ ಸುಧಾರಣೆ – ಸೇನಾ ಆಸ್ಪತ್ರೆ
ಹೊಸದಿಲ್ಲಿ, ಅಗಸ್ಟ್20: ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಶ್ವಾಸಕೋಶದಲ್ಲಿ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡ ನಂತರ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದ್ದು, ಇಂದು ಸ್ವಲ್ಪ ಸುಧಾರಣೆಯ ಲಕ್ಷಣಗಳನ್ನು ತೋರಿಸುತ್ತಿದೆ ಎಂದು ಸೇನಾ ಸಂಶೋಧನೆ ಮತ್ತು ರೆಫರಲ್ ಆಸ್ಪತ್ರೆ ಗುರುವಾರ ತಿಳಿಸಿದೆ.

ಕಳೆದ ಹತ್ತು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರು ಮೆದುಳಿನ ಶಸ್ತ್ರಚಿಕಿತ್ಸೆಯ ನಂತರ ವೆಂಟಿಲೇಟರ್ ಬೆಂಬಲದಲ್ಲಿದ್ದಾರೆ. ಆಸ್ಪತ್ರೆಯ ಅಧಿಕಾರಿಗಳು, ಮಾನ್ಯ ಶ್ರೀ ಪ್ರಣಬ್ ಮುಖರ್ಜಿ ಅವರ ಉಸಿರಾಟದ ನಿಯತಾಂಕಗಳು ಸ್ವಲ್ಪ ಸುಧಾರಣೆಯನ್ನು ತೋರಿಸಿದರೂ ಅವರಿಗೆ ವೆಂಟಿಲೇಟರ್ ನೆರವಿನೊಂದಿಗೆ ಚಿಕಿತ್ಸೆ ಮುಂದುವರೆದಿದೆ ಎಂದು ಹೇಳಿಕೆ ನೀಡಿದ್ದಾರೆ.

ಅವರ ಪ್ರಮುಖ ಮತ್ತು ಕ್ಲಿನಿಕಲ್ ನಿಯತಾಂಕಗಳು ಸ್ಥಿರವಾಗಿದೆ ಮತ್ತು ತಜ್ಞರ ತಂಡವು ಮೇಲ್ವಿಚಾರಣೆ ನಡೆಸುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಮಾಜಿ ರಾಷ್ಟ್ರಪತಿಗಳ ಆರೋಗ್ಯ ಸ್ಥಿತಿ ಹದಗೆಟ್ಟಿದೆ ಎಂದು ಬುಧವಾರ ಅಧಿಕಾರಿಗಳು ತಿಳಿಸಿದ್ದರು.
ಆಗಸ್ಟ್ 10 ರಂದು ಅವರಿಗೆ ಮೆದುಳಿನ ಹೆಪ್ಪುಗಟ್ಟುವಿಕೆಗೆ ತುರ್ತು ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು ಮತ್ತು ಪ್ರಣಬ್ ಮುಖರ್ಜಿ ಅವರಿಗೆ ಕೋವಿಡ್ -19 ಸೋಂಕು ಕೂಡ ದೃಢಪಟ್ಟಿತ್ತು.








