ವಾಷಿಂಗ್ಟನ್: ಡೆಮಾಕ್ರಟಿಕ್ ನಾಯಕ, ಅಮೆರಿಕದ ಮಾಜಿ ಅಧ್ಯಕ್ಷ (Former US President) ಜಿಮ್ಮಿ ಕಾರ್ಟರ್ (100) ಜಾರ್ಜಿಯಾದಲ್ಲಿ ಇಂದು ನಿಧನರಾಗಿದ್ದಾರೆ.
ಮಾನವೀಯ ಕೆಲಸಕ್ಕಾಗಿ 2002 ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ಗೆದ್ದಿದ್ದ ಕಾರ್ಟರ್(Jimmy Carter) ಇಸ್ರೇಲ್ ಮತ್ತು ಈಜಿಪ್ಟ್ ಮಧ್ಯಸ್ಥಿತಿಕೆ ನಡೆಸಿ ಶಾಂತಿ ಮಾತುಕತೆ ನಡೆಸುವಲ್ಲಿ ಯಶಸ್ವಿಯಾಗಿದ್ದರು. 1977 ರಿಂದ 1981 ರವರೆಗೆ 39ನೇ ಅಮೆರಿಕದ ಅಧ್ಯಕ್ಷರಾಗಿ ಜಿಮ್ಮಿ ಕಾರ್ಟರ್ ಸೇವೆ ಸಲ್ಲಿಸಿದ್ದರು. 1980 ರ ಚುನಾವಣೆಯಲ್ಲಿ ನಟ, ರಾಜಕಾರಣಿ ರೊನಾಲ್ಡ್ ರೇಗನ್ ವಿರುದ್ಧ ಸೋತಿದ್ದರು.
ಭಾರತಕ್ಕೆ ಭೇಟಿ ನೀಡಿದ್ದ ಅಮೆರಿಕದ ಮೂರನೇ ಅಧ್ಯಕ್ಷ ಕಾರ್ಟರ್ ಆಗಿದ್ದರು. ಜಾಕ್, ಚಿಪ್, ಜೆಫ್, ಆ್ಯಮಿ ಎಂಬ ನಾಲ್ವರು ಮಕ್ಕಳನ್ನು ಅಗಲಿರುವ ಜಿಮ್ಮಿಗೆ 11 ಜನ ಮೊಮ್ಮಕ್ಕಳು, 14 ಜನ ಮರಿಮೊಮ್ಮಕ್ಕಳಿದ್ದಾರೆ.
ನನ್ನ ತಂದೆ ನನಗೆ ಮಾತ್ರವಲ್ಲ, ಶಾಂತಿ, ಮಾನವ ಹಕ್ಕುಗಳು ಮತ್ತು ನಿಸ್ವಾರ್ಥ ಪ್ರೀತಿಯನ್ನು ನಂಬುವ ಪ್ರತಿಯೊಬ್ಬರಿಗೂ ಹೀರೋ ಆಗಿದ್ದರು ಎಂದು ಚಿಪ್ ಕಾರ್ಟರ್ ತಿಳಿಸಿದ್ದಾರೆ.








