ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್) ಗಣಿತ ಶಾಸ್ತ್ರ ಆಧಾರಿತ ಸಂಶೋಧನಾ ವರದಿಯೊಂದನ್ನು ಸಿದ್ಧ ಪಡಿಸಿದ್ದು, ಆ ವರದಿಯಲ್ಲಿ ಒಬ್ಬ ಭಾರತೀಯನಿಗೆ ಕೊರೊನಾ ವೈರಸ್ ಸೋಂಕು ತಗುಲಿದರೆ, ಅದು ಆತನಿಂದ ನಾಲ್ಕು ಜನರಿಗೆ ಏಕ ಕಾಲದಲ್ಲಿ ಹರಡಬಹುದು ಎಂದು ತಿಳಿಸಿದೆ.
ಈ ವರದಿಯನ್ನು ಫೆಬ್ರವರಿಯಲ್ಲಿ ಸಿದ್ಧ ಪಡಿಸಲಾಗಿದ್ದು, ಅದರಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರಿಂದ ಆಗುವ ಪ್ರಯೋಜನಗಳನ್ನು ಅಂಕಿ ಅಂಶಗಳ ಮೂಲಕ ಪ್ರಸ್ತುತಗೊಳಿಸಿದೆ. ಸೋಂಕಿತರನ್ನು ಮತ್ತು ಸೋಂಕು ಶಂಕಿತರನ್ನು 3 ದಿನಗಳ ಕಾಲ ಸ್ವಯಂ ನಿರ್ಬಂಧಕ್ಕೆ ಒಳಪಡಿಸುವುದರಿಂದ ಕೊರೊನಾ ಹರಡುವಿಕೆಯನ್ನು ಶೇಕಡಾ 62 ರಷ್ಟು ಕಡಿಮೆ ಮಾಡಬಹುದು ಎಂದು ವರದಿಯಲ್ಲಿ ತಿಳಿಸಲಾಗಿದೆ.
ಸೋಂಕು ಆರಂಭಿಕ ಹಂತದಲ್ಲಿ ಈ ವರದಿಯನ್ನು ಸಿದ್ಧ ಪಡಿಸಲಾಗಿದ್ದರೂ, ವೈರಾಣು ಹರಡುವ ವೇಗವನ್ನು ಗಮನದಲ್ಲಿಟ್ಟುಕೊಂಡು ಈ ವರದಿ ಸಿದ್ಧಪಡಿಸಲಾಗಿದೆ. ಆದ್ದರಿಂದ ನಿರ್ದಿಷ್ಟ ಸಮಯದಲ್ಲಿ ಸೋಂಕಿತರು ಎಷ್ಟು ಜನರಿಗೆ ಹರಡುವ ಸಾಧ್ಯತೆ ಇದೆ ಎನ್ನುವುದು ಬದಲಾಗದ ಸತ್ಯ ಎಂದು ಐಸಿಎಂಆರ್ ನ ಸಾಂಕ್ರಾಮಿಕ ರೋಗಗಳ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ.ರಮಣ ಆರ್.ಗಂಗಖೇಡ್ಕರ್ ಹೇಳಿದ್ದಾರೆ.