ದಾವಣಗೆರೆ ನವೋದಯ ಶಾಲೆ ವಿದ್ಯಾರ್ಥಿಗಳಿಗೆ ಕರೋನ, ಶಾಲೆ ಸೀಲ್ ಡೌನ್
ದಾವಣಗೆರೆ: ರಾಜ್ಯದ ಹಲವು ವಸತಿ ಶಾಲೆಗಳಲ್ಲಿ ಕರೋನ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈಗ ಈ ಸಾಲಿಗೆ ಚನ್ನಗಿರಿ ತಾಲೂಕಿನ ದೇವರಹಳ್ಳಿ ಬಳಿಯಿರುವ ಜವಾಹರ್ ನವೋದಯ ವಿದ್ಯಾಲಯ ವಸತಿ ಶಾಲೆಯ ಕೂಡ ಸೇರಿದೆ. ನವೋದಯ ವಸತಿ ಶಾಲೆಯ ನಾಲ್ವರು ವಿದ್ಯಾರ್ಥಿಗಳಿಗೆ ಸೋಂಕು ಕಾಣಿಸಿಕೊಂಡಿದೆ.
ಈ ಕುರಿತು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಾಘವನ್ ಮಾಹಿತಿ ನೀಡಿದ್ದಾರೆ. ಡಿ 1 ರಿಂದ ಡಿ 12 ವರೆಗೆ ಜಿಲ್ಲೆಯ 4,882 ವಿದ್ಯಾರ್ಥಿಗಳಿಗೆ ಕೊರೊನಾ ಪರೀಕ್ಷೆ ಮಾಡಲಾಗಿದೆ. ಈ ಪೈಕಿ 3,667 ವಿದ್ಯಾರ್ಥಿಗಳಿಗೆ ನೆಗೆಟಿವ್ ವರದಿ ಬಂದಿದೆ. ಉಳಿದ 1,215 ವರದಿಗಳಿಗಾಗಿ ಜಿಲ್ಲಾಡಳಿತ ಕಾದು ಕುಳಿತಿದೆ.
ಕೋವಿಡ್ ಪಾಸಿಟಿವ್ ಬಂದ ನಾಲ್ವರು ವಿದ್ಯಾರ್ಥಿಗಳಿಗೆ ದಾವಣಗೆರೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದ ವಿದ್ಯಾರ್ಥಿಗಳ ಹಾಗೂ ಸಿಬ್ಬಂದಿಯ ವರದಿ ಇಂದು ಸಂಜೆಯೊಳಗೆ ಲಭ್ಯವಾಗಲಿದೆ. ನವೋದಯ ಶಾಲೆಯ 25 ಜನ ಸಿಬ್ಬಂದಿ ಸೇರಿ 539 ಜನರ ಗಂಟಲು ದ್ರವವನ್ನು ಸಂಗ್ರಹಿಸಲಾಗಿದೆ. ಸದ್ಯ ಶಾಲೆಯನ್ನು ಸೀಲ್ ಡೌನ್ ಮಾಡಲಾಗಿದೆ ಅಂತ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಾಘವನ್ ತಿಳಿಸಿದ್ದಾರೆ.








