ಉತ್ತರ ಪ್ರದೇಶದ ನಾಲ್ಕನೇ ಹಂತದ ಚುನಾವಣೆ Saaksha Tv
ಲಕ್ನೋ: ಉತ್ತರ ಪ್ರದೇಶದ ನಾಲ್ಕನೇ ಹಂತದ 59 ವಿಧಾನಸಭೆ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ.
ಇಂದು ರಾಜಧಾನಿ ಲಕ್ನೋ ಮತ್ತು ಲಖಿಂಪುರ ಖೇರಿ ಸೇರಿದಂತೆ ಸೋನಿಯಾ ಗಾಂಧಿ ಅವರ ಭದ್ರಕೋಟೆಯಾದ ರಾಯ್ ಬರೇಲಿಯ ಐದು ಕ್ಷೇತ್ರಗಳಲ್ಲಿ ಮತ್ತು ಪಿಲಿಭಿತ್, ಲಖಿಂಪುರ ಖೇರಿ, ಸೀತಾಪುರ್, ಹರ್ದೋಯಿ, ಉನ್ನಾವೋ, ಲಕ್ನೋ, ರಾಯ್ ಬರೇಲಿ, ಬಂದಾ ಮತ್ತು ಫತೇಪುರ್ ಜಿಲ್ಲೆಗಳಲ್ಲಿ ಕೂಡ ಚುನಾವಣೆ ನಡೆಯುತ್ತಿದೆ.
2017 ರಲ್ಲಿ 59 ಕ್ಷೇತ್ರಗಳಲ್ಲಿ ಬಿಜೆಪಿ 51 ಸ್ಥಾನಗಳನ್ನು ಗೆದ್ದುಕೊಂಡಿತು, ನಾಲ್ಕು ಸಮಾಜವಾದಿ ಪಕ್ಷಕ್ಕೆ, ಎರಡು ಕಾಂಗ್ರೆಸ್ಗೆ ಮತ್ತು ಎರಡು ಮಾಯಾವತಿಯ ಬಹುಜನ ಸಮಾಜ ಪಕ್ಷಕ್ಕೆ ಬಂದಿದ್ದವು. ಬಿಜೆಪಿಯ ಮಿತ್ರ ಪಕ್ಷವಾದ ಅಪ್ನಾ ದಳ (ಸೋನೆಲಾಲ್) ಒಂದು ಸ್ಥಾನವನ್ನು ಗಳಿಸಿತ್ತು.
ಲಖಿಂಪುರದ ಎಲ್ಲಾ 8 ಸ್ಥಾನಗಳು ಇದೀಗ ಬಿಜೆಪಿ ಬಳಿ ಇವೆ. ಬಿಜೆಪಿ ಮತ್ತು ಎಸ್ಪಿ ಎರಡೂ ಪಕ್ಷಗಳು ಲಖಿಂಪುರ ನಗರ ಕ್ಷೇತ್ರದಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಸಿವೆ. 2017 ರ ಚುನಾವಣೆಯಲ್ಲಿ ಈ ಸ್ಥಾನವನ್ನು ಗೆದ್ದ ಬಿಜೆಪಿಯ ಯೋಗೇಶ್ ವರ್ಮಾ. ಮತ್ತು ಸಮಾಜವಾದಿ ಪಕ್ಷದ ಉತ್ಕರ್ಷ್ ವರ್ಮಾ ಮಧುರ್ ಅವರು ಕಣದಲ್ಲಿದ್ದಾರೆ. ಇನ್ನೂ ಕಾಂಗ್ರೆಸ್ ರವಿಶಂಕರ್ ತ್ರಿವೇದಿ ಅವರನ್ನು ಕಣಕ್ಕಿಳಿಸಿದೆ.
ಅಲ್ಲದೆ ಉತ್ತರ ಪ್ರದೇಶದ ಕಾನೂನು ಸಚಿವ ಬ್ರಜೇಶ್ ಪಾಠಕ್, ರಾಯ್ ಬರೇಲಿಯ ಹಾಲಿ ಶಾಸಕಿ ಅದಿತಿ ಸಿಂಗ್, ಜಾರಿ ನಿರ್ದೇಶನಾಲಯದ ಮಾಜಿ ಜಂಟಿ ನಿರ್ದೇಶಕ ರಾಜೇಶ್ವರ್ ಸಿಂಗ್ ಮತ್ತು ಉನ್ನಾವೋ ಅತ್ಯಾಚಾರ ಸಂತ್ರಸ್ತೆಯ ತಾಯಿ ಆಶಾ ಸಿಂಗ್ ಸೇರಿದಂತೆ 624 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.
ನಾಲ್ಕನೇ ಹಂತದಲ್ಲಿ 9 ಜಿಲ್ಲೆಗಳಲ್ಲಿ 13,817 ಮತ ಕೇಂದ್ರಗಳನ್ನ ತೆರೆಯಲಾಗಿದ್ದು, 24,643 ಮತ ಯಂತ್ರಗಳನ್ನು ಇಡಲಾಗಿದೆ. ಸುಗಮ ಮತದಾನಕ್ಕಾಗಿ ಹಾಗೂ ಚುನಾವಣಾ ಪ್ರಕ್ರಿಯೆಯ ಮೇಲ್ವಿಚಾರಣೆಗಾಗಿ 9 ಪೊಲೀಸ್ ವೀಕ್ಷಕರು, 57 ಸಾಮಾನ್ಯ ವೀಕ್ಷಕರು ಮತ್ತು 18 ವೆಚ್ಚ ವೀಕ್ಷಕರನ್ನು ಚುನಾವಣಾ ಆಯೋಗವು ನಿಯೋಜಿಸಿದೆ.
ಇವಿಎಂಗಳ ಸ್ಟ್ರಾಂಗ್ ರೂಂಗಳ ಭದ್ರತೆಯ ಜವಾಬ್ದಾರಿಯನ್ನು ಅರೆಸೇನಾ ಪಡೆಗಳಿಗೆ ನೀಡಲಾಗಿದೆ. ಜೊತೆಗೆ 1 ಲಕ್ಷ 15 ಸಾವಿರದ 725 ಮತಗಟ್ಟೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಈಗಾಗಲೇ ಎಲ್ಲಾ ಮತಗಟ್ಟೆಗಳ ಬಳಿ ಪೊಲೀಸ್ ಸಿಬ್ಬಂದಿ ಆಯೋಜಿಸಲಾಗಿದ್ದು, ಹೆಚ್ಚುವರಿಯಾಗಿ 7,022 ಇನ್ಸ್ಪೆಕ್ಟರ್ಗಳು ಮತ್ತು ಸಬ್ ಇನ್ಸ್ಪೆಕ್ಟರ್ಗಳು ಹಾಗೂ 58,132 ಹೆಡ್ ಕಾನ್ಸ್ಟೇಬಲ್ಗಳು ಮತ್ತು ಕಾನ್ಸ್ಟೇಬಲ್ಗಳನ್ನು ನಿಯೋಜಿಸಲಾಗುವುದು.
ಲಖಿಂಪುರ ಖೇರಿಯಲ್ಲಿ ಜೀಪು ಹರಿಸಿ ರೈತರ ಹತ್ಯೆಯ ಆರೋಪ ಹೊತ್ತಿರುವ ಆಶಿಶ್ ಮಿಶ್ರಾ ಅವರ ತಂದೆ, ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪ್ರಭಾವ ಎಷ್ಟಿದೆ ಎಂಬುದು ಸ್ಪಷ್ಟವಾಗಲಿದೆ. ಹತ್ಯೆ ಪ್ರಕರಣವು ರೈತರಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಇನ್ನೊಂದೆಡೆ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪ್ರತಿನಿಧಿಸುವ ರಾಯ್ ಬರೇಲಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿಯೂ ಮತದಾನ ನಡೆಯುತ್ತಿದೆ. ಮಾ.10ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.
ಮಹಿಳಾ ಮತದಾರರನ್ನು ಪ್ರೇರೇಪಿಸಲು, ರಾಜ್ಯ ಪೊಲೀಸರು 137 “ಪಿಂಕ್ ಬೂತ್ಗಳನ್ನು” ರಚಿಸಿದ್ದಾರೆ, ಇದನ್ನು ಮಹಿಳಾ ಅಧಿಕಾರಿಗಳು ನಿರ್ವಹಿಸಿದ್ದಾರೆ. ಲಕ್ನೋದ ಕ್ರೈಸ್ಟ್ ಚರ್ಚ್ ಕಾಲೇಜು ಪೋಷಕರು ಮತ ಚಲಾಯಿಸುವ ವಿದ್ಯಾರ್ಥಿಗಳಿಗೆ 10 ಅಂಕಗಳನ್ನು ನೀಡುವುದಾಗಿ ಘೋಷಿಸಿದೆ.
ಏಳು ಹಂತದ ಯುಪಿ ಚುನಾವಣೆಯ ಉಳಿದ ಮೂರು ಹಂತಗಳಿಗೆ ಫೆಬ್ರವರಿ 27, ಮಾರ್ಚ್ 3 ಮತ್ತು 7 ರಂದು ಮತದಾನ ನಡೆಯಲಿದೆ. ಮತಗಳ ಎಣಿಕೆ ಮಾರ್ಚ್ 10 ರಂದು ನಡೆಯಲಿದೆ.