ಬಿಸಿಸಿಐ ಹಲವು ಪ್ರಶ್ನೆಗಳಿಗೆ ಉತ್ತರ ನೀಡಿ ಐಪಿಎಲ್ ಟೂರ್ನಿ ಆಯೋಜನೆ ಮಾಡಬೇಕಾಗುತ್ತದೆ..!
ಯುಎಇನಲ್ಲಿ 13ನೇ ಆವೃತ್ತಿಯ ಐಪಿಎಲ್ ನಡೆದ್ರೂ ಸವಾಲುಗಳು ಬೆಟ್ಟದಷ್ಟಿವೆ…! ಸೆಪ್ಟಂಬರ್ 19ರಿಂದ ನವೆಂಬರ್ 8ರವರೆಗೆ ಐಪಿಎಲ್ ಆಯೋಜನೆಗೆ ಬಿಸಿಸಿಐ ಸನ್ನದ್ದಗೊಳುತ್ತಿದೆ. ಅಂತಿಮ ರೂಪುರೇಷೆ ಇನ್ನೊಂದು ನಾಲ್ಕೈದು ದಿನಗಳಲ್ಲಿ ಗೊತ್ತಾಗಲಿದೆ. ಅದೇ ರೀತಿ ಕೇಂದ್ರ ಸರ್ಕಾರದ ಅನುಮತಿಯನ್ನು ಪಡೆಯಬೇಕಾಗಿದೆ.
ಜೈವಿಕ್ ಭದ್ರತೆಯೊಂದಿಗೆ ಕೋವಿಡ್-19 ಮಾರ್ಗಸೂಚಿ ಮತ್ತು ಶಿಷ್ಟಚಾರಗಳನ್ನು ಪಾಲಿಸಿಕೊಂಡು ಐಪಿಎಲ್ ಟೂರ್ನಿಯನ್ನು ಸಂಘಟಿಸಲು ಬಿಸಿಸಿಐ ಮತ್ತು ಯುಎಇ ಮಾತುಕತೆ ನಡೆಸಿವೆ. ಯುಎಇ ಕ್ರಿಕೆಟ್ ಸಂಸ್ಥೆ ಐಪಿಎಲ್‍ಗೆ ಕಿಂಚಿತ್ತೂ ದಕ್ಕೆಯಾಗದಂತೆ ಆತಿಥ್ಯ ವಹಿಸಲು ಸರ್ವ ಸನ್ನದ್ಧವಾಗುತ್ತಿದೆ. ಈ ಹಿಂದೆ 2014ರ ಐಪಿಎಲ್ ಟೂರ್ನಿಗೆ ಯುಎಇ ಆತಿಥ್ಯ ವಹಿಸಿ ಸೈ ಎನ್ನಿಸಿಕೊಂಡಿದೆ.
ಆದ್ರೆ ಈ ಬಾರಿಯ ಐಪಿಎಲ್ ವಿಭಿನ್ನ. ಸಾಕಷ್ಟು ವ್ಯತ್ಯಾಸಗಳಿವೆ. ಮೋಜು, ಮಸ್ತಿ, ಮನರಂಜನೆಗೆ ಅವಕಾಶವೇ ಇಲ್ಲ. ಅದೂ ಅಲ್ಲದೆ ಪ್ರೇಕ್ಷಕರಿಲ್ಲದೇ ನಡೆಯುತ್ತಿರುವ ಮೊದಲ ಐಪಿಎಲ್ ಆಗಿದೆ. ಹೀಗಾಗಿ ಈ ಬಾರಿಯ ಐಪಿಎಲ್ ಟೂರ್ನಿಯ ಪ್ರತಿ ಹೆಜ್ಜೆಯ ಮೇಲೂ ನಿಗಾ ಇಡಬೇಕಾಗುತ್ತದೆ. ಆಟಗಾರರಿಗೆ, ಅಂಪೈರ್, ಫ್ರಾಂಚೈಸಿ ಮಾಲೀಕರು, ಟೀಮ್ ಮ್ಯಾನೇಜ್‍ಮೆಂಟ್ ಸಿಬ್ಬಂದಿಗಳು, ಬಸ್ ಡ್ರೈವರ್, ಕ್ಯಾಟರಿಂಗ್ ಸಿಬ್ಬಂದಿಗಳು, ಗ್ರೌಂಡ್ಸ್ ಮೆನ್‍ಗಳು ಹೀಗೆ ಆಟಕ್ಕೆ ಬೇಕಾದಂತಹ ಎಲ್ಲಾ ಸಿಬ್ಬಂದಿಗಳಿಗೂ ಪ್ರತಿ ದಿನ ಪರೀಕ್ಷೆ ನಡೆಸಬೇಕಾಗುತ್ತೆ. ಈ ಬಗ್ಗೆ ಬಿಸಿಸಿಐ ಸ್ಟ್ಯಾಡಿಂಗ್ ಆಪರೇಟ್ ಪ್ರೊಸಿಜರ್ (ಎಸ್‍ಒಪಿ) ರಚಿಸಿದೆ.
ಆಟಗಾರರ ಕುಟುಂಬಗಳಿಗೆ ಅವಕಾಶ ಇಲ್ಲ..?
ಸಾಮಾನ್ಯವಾಗಿ ಐಪಿಎಲ್ ಟೂರ್ನಿ ನಡೆದಾಗ ಆಟಗಾರರ ಕುಟುಂಬದ ಸದಸ್ಯರಿಗೂ ಅವಕಾಶವಿತ್ತು. ಪತ್ನಿ, ಮಕ್ಕಳು, ಕುಟುಂಬದ ಸದಸ್ಯರು ಭಾಗಿಯಾಗುತ್ತಿದ್ದರು. ಆದ್ರೆ ಈ ಬಾರಿಯ ಐಪಿಎಲ್ ನಲ್ಲಿ ಈ ಅವಕಾಶವಿಲ್ಲ ಅಂತ ಕಾಣುತ್ತೆ. ಆಟಗಾರರು ಕ್ವಾರಂಟೈನ್ ಮತ್ತು ಜೈವಿಕ ಸುರಕ್ಷತೆಯಲ್ಲಿರುವುದರಿಂದ ಹೊರಗಿನವರ ಜೊತೆಗೆ ಸಂಪರ್ಕ ಸಾಧಿಸುವಂತಿಲ್ಲ. ಒಂದು ವೇಳೆ ಶಿಷ್ಟಚಾರ ಉಲ್ಲಂಘನೆಯಾದ್ರೆ ಎಲ್ಲರಿಗೂ ಅಪಾಯ ತಪ್ಪಿದ್ದಲ್ಲ. ಹೀಗಾಗಿ ಆಟಗಾರರು ಪತ್ನಿ, ಮಕ್ಕಳು, ಪ್ರೇಯಸಿ, ಕುಟುಂಬದ ಸದಸ್ಯರಿಂದ ಸುಮಾರು ಎರಡು ತಿಂಗಳು ದೂರವೇ ಇರಬೇಕಾಗುತ್ತದೆ.
ದುಬಾರಿ ಹೊಟೇಲ್, ಹೈಟೆಕ್ ಸೌಲಭ್ಯಗಳಿಗೆ ಕಡಿತ ?
ಇನ್ನು ಫ್ರಾಂಚೈಸಿಗಳು ತಮ್ಮ ಪ್ರತಿಷ್ಠೆಗಾಗಿ ದುಬಾರಿ ಹೊಟೇಲ್‍ಗಳನ್ನು ಬುಕ್ ಮಾಡಿಕೊಳ್ಳುತ್ತವೆ. ಆದ್ರೆ ದುಬೈನಲ್ಲಿ ಫೈ ಸ್ಟಾರ್ ಹೊಟೇಲ್‍ಗಳು ತುಂಬಾನೇ ದುಬಾರಿಯಾಗಿವೆ. ಈ ನಡುವೆ ದುಬೈನ ತ್ರಿ ಸ್ಟಾರ್ ಹೊಟೇಲ್‍ಗಳು ಕೂಡ ಪಂಚತಾರಾ ಹೊಟೇಲ್‍ನ ಸವಲತ್ತುಗಳಿಗಿಂತ ಏನು ಕಮ್ಮಿ ಏನು ಇಲ್ಲ. ಅದೂ ಅಲ್ಲದೆ ಕೊರೋನಾ ಸೋಂಕಿನಿಂದಾಗಿ ಎಸಿ ರೂಂಗಳನ್ನು ಬಳಕೆ ಮಾಡುವುದು ಸರಿಯಲ್ಲ ಎಂಬ ಮಾತಿದೆ. ಹೀಗಾಗಿ ಅಲ್ಲಿನ ರೆಸಾರ್ಟ್‍ಗಳಲ್ಲಿ ಆಟಗಾರರು ತಂಗಬಹುದು. ಹಾಗೇ ಎಲ್ಲಾ ಫ್ರಾಂಚೈಸಿಗಳು ಮುಂಬೈ ಇಂಡಿಯನ್ಸ್ ತಂಡದ ಹಾಗೇ ಶ್ರೀಮಂತವಾಗಿಲ್ಲ. ಅಂಬಾನಿ ಒಡೆತನದ ಮುಂಬೈ ಇಂಡಿಯನ್ಸ್‍ಗೆ ದುಡ್ಡಿಗೆ ಬರವಿಲ್ಲ. ಅಂಬಾನಿ ತಂಡಕ್ಕೆ ಎಲ್ಲಾ ರೀತಿಯ ಹೈಫೈ ಸೌಲಭ್ಯಗಳನ್ನು ನೀಡುವಂತಹ ಸಾಮಥ್ರ್ಯವಿದೆ. ಒಂದಂತೂ ಸತ್ಯ, ಎಷ್ಟೇ ಸಿರಿತನವಿದ್ರೂ ಕೋವಿಡ್-19 ಮುಂದೆ ಎಲ್ಲರೂ ಬಡವರೇ..
ಬಸ್ ಡ್ರೈವರ್ – ಸ್ಥಳೀಯ ಭದ್ರತಾ ಸಿಬ್ಬಂದಿಗಳು…?
ಪ್ರತಿ ಫ್ರಾಂಚೈಸಿಗಳಿಗೆ ಪ್ರತ್ಯೇಕ ಬಸ್‍ಗಳಿರುತ್ತವೆ. ಹೀಗಾಗಿ ಬಸ್ ಡ್ರೈವರ್‍ಗಳು ಕೂಡ ಹೊಟೇಲ್‍ನಲ್ಲಿ ತಂಗಬೇಕಾಗುತ್ತದೆ. ಈ ಹಿಂದೆ ಅವರೆಲ್ಲಾ ತಮ್ಮ ಮನೆಗೆ ತೆರಳುತ್ತಿದ್ದರು. ಆದ್ರೆ ಈ ಬಾರಿ ಅವರಿಗೂ ಪ್ರತ್ಯೇಕ ಹೊಟೇಲ್‍ಗಳನ್ನು ಬುಕ್ ಮಾಡಿ ಅವರನ್ನು ಕೂಡ ಪ್ರತಿ ದಿನ ಪರೀಕ್ಷೆ ನಡೆಸಬೇಕಾಗುತ್ತದೆ. ಅದೇ ರೀತಿ ಭದ್ರತಾ ಸಿಬ್ಬಂದಿಗಳಿಗೂ ಅನ್ವಯವಾಗುತ್ತದೆ.
ಒಟ್ಟಿನಲ್ಲಿ ಈ ಬಾರಿಯ ಐಪಿಎಲ್ ಕೋವಿಡ್-19ನಿಂದಾಗಿ ವಿಭಿನ್ನವಾಗಿ ನಡೆಯಲಿದೆ. ಇನ್ನು ಚಿಯರ್ಸ್ ಲೀಡರ್ಸ್‍ಗಳಿಗೆ ಅವಕಾಶಗಳಿರುತ್ತಾ ಎಂಬುದರ ಬಗ್ಗೆಯೂ ನಿರ್ಧಾರವಾಗಿಲ್ಲ. ಒಟ್ಟಾರೆ, ಬಿಸಿಸಿಐ ಹಲವು ಆಯಾಮಗಳನ್ನು ನೋಡಿಕೊಂಡು ಬಿಸಿಸಿಐ ಬಹಳ ಎಚ್ಚರಿಕೆಯಿಂದ ಪ್ಲಾನ್ ಮಾಡಿಕೊಂಡು ಟೂರ್ನಿಯನ್ನು ಆಯೋಜನೆ ಮಾಡಬೇಕಾಗುತ್ತದೆ.








