ಐಪಿಎಲ್ ಟೂರ್ನಿ ಪೂರ್ಣ ಪ್ರಮಾಣದಲ್ಲಿ ನಡೆದ್ರೆ ಓಕೆ.. ಇಲ್ಲಾ ಅಂದ್ರೆ…. – ವೆಂಕಿ ಮೈಸೂರು
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಯವರು ಈಗಾಗಲೇ 2020ರ ಐಪಿಎಲ್ ಟೂರ್ನಿಯನ್ನು ಸಂಘಟಿಸುವ ಬಗ್ಗೆ ಸಣ್ಣ ಸುಳಿವನ್ನು ನೀಡಿದ್ದಾರೆ. ಅಲ್ಲದೆ ಖಾಲಿ ಕ್ರೀಡಾಂಗಣದಲ್ಲಿ ಟೂರ್ನಿಯನ್ನು ನಡೆಸಿದ್ರೂ ನಡೆಸಬಹುದು ಎಂದು ವಿವಿಧ ಕ್ರಿಕೆಟ್ ಸಂಸ್ಥೆಗಳಿಗೆ ಮತ್ತು ಐಪಿಎಲ್ ಫ್ರಾಂಚೈಸಿಗಳಿಗೆ ಪತ್ರ ಬರೆದಿದ್ದಾರೆ.
ಕೊರೋನಾ ವೈರಸ್ ನಿಂದಾಗಿ ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಲೇಬೇಕಾಗುತ್ತದೆ. ಒಂದು ವೇಳೆ ಬಿಸಿಸಿಐ ಐಪಿಎಲ್ ಟೂರ್ನಿಯನ್ನು ನಡೆಸಲು ಮುಂದಾದ್ರೂ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಬೇಕು. ಸದ್ಯದ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರ ಐಪಿಎಲ್ ಟೂರ್ನಿಯನ್ನು ಸಂಘಟಿಸಲು ಸಹಮತ ಸೂಚಿಸುವುದು ಕೂಡ ಅಸಾಧ್ಯ.
ಇನ್ನೊಂದೆಡೆ ಐಪಿಎಲ್ ಫ್ರಾಂಚೈಸಿಗಳು ಕೂಡ ಒಪ್ಪಿಗೆ ನೀಡಬೇಕು. ವಿದೇಶಿ ಆಟಗಾರರು ತಂಡದಲ್ಲಿರಬೇಕಾ ಬೇಡ್ವಾ, ಖಾಲಿ ಕ್ರೀಡಾಂಗಣದಲ್ಲಿ ಟೂರ್ನಿಯನ್ನು ನಡೆಸುವ ಬಗ್ಗೆ ಹೀಗೆ ಹಲವಾರು ವಿಚಾರಗಳ ಬಗ್ಗೆಯೂ ಬಿಸಿಸಿಐ ಐಪಿಎಲ್ ಫ್ರಾಂಚೈಸಿಗಳ ಜೊತೆ ಮಾತುಕತೆ ನಡೆಸಬೇಕಾಗುತ್ತದೆ. ಈ ನಡುವೆ
ಫ್ರಾಂಚೈಸಿಗಳು ಸಹ ಕೆಲವೊಂದು ಷರತ್ತುಗಳನ್ನು ವಿಧಿಸುವಂತಹ ಸಾಧ್ಯತೆಗಳಿವೆ.
ಇದಕ್ಕೆ ಪೂರಕವಾಗಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಸಿಇಓ ವೆಂಕಿ ಮೈಸೂರು ಅವರು ಸಣ್ಣ ಮಟ್ಟದ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಐಪಿಎಲ್ ಟೂರ್ನಿಯೂ ಪೂರ್ಣ ಪ್ರಮಾಣದಲ್ಲಿ ನಡೆದ್ರೆ ಮಾತ್ರ ನಾವು ಸಹಮತ ಸೂಚಿಸುವುದು ಅಂತ ಹೇಳಿಕೆ ನೀಡಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ಯಾವುದೇ ರೀತಿಯ ಬದಲಾವಣೆಗಳನ್ನು ಮಾಡಬಾರದು. ಈ ಹಿಂದೆ ಹೇಗೆ ನಡೆಯುತ್ತಿತ್ತೋ ಅದೇ ರೀತಿಯಲ್ಲಿ ಟೂರ್ನಿಯನ್ನು ಸಂಘಟಿಸಬೇಕು. ಇಲ್ಲದೇ ಇದ್ರೆ ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿ ಸಹಮತ ನೀಡುವುದಿಲ್ಲ ಎಂದಿದ್ದಾರೆ.
ಐಪಿಎಲ್ ಟೂರ್ನಿಯ ಗುಣಮಟ್ಟದಲ್ಲಿ ಯಾವುದೇ ರೀತಿಯ ರಾಜಿ ಮಾಡಿಕೊಳ್ಳಬಾರದು. ಇದಕ್ಕೆ ಎಲ್ಲಾ ಫ್ರಾಂಚೈಸಿಗಳ ಅಭಿಪ್ರಾಯವನ್ನು ಪಡೆದುಕೊಳ್ಳಬೇಕು. ಟೂರ್ನಿಯೂ ಪೂರ್ಣ ಪ್ರಮಾಣದಲ್ಲಿ ನಡೆಯಬೇಕು. ಹಾಗೇ ಪಂದ್ಯಗಳ ಸಂಖ್ಯೆಯನ್ನು ಕಡಿತ ಮಾಡಬಾರದು. ಎಲ್ಲಾ ಆಟಗಾರರು ಭಾಗಿಯಾಗಬೇಕು ಎಂದು ವೆಂಕಿ ಮೈಸೂರು ಹೇಳಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಆಂಫಾನ್ ಚಂಡಮಾರುತ ಮತ್ತು ಕೋವಿಡ್-19ನಿಂದ ತೊಂದರೆಯಾದವರಿಗೆ ಕೆಕೆಆರ್ ಸಹಾಯತ ವಾಹನ್ ಅಭಿಯಾನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೇಳೆ ವೆಂಕ್ ಮೈಸೂರು ಅವರು ಕೆಕೆಆರ್ ತಂಡದ ಅಭಿಮತವನ್ನು ಹೇಳಿದ್ರು.
ಇನ್ನು ವಿದೇಶಿ ಆಟಗಾರರ ಅನುಪಸ್ಥಿತಿಯಲ್ಲಿ ಐಪಿಎಲ್ ಆಡುವುದು ಸೂಕ್ತವಲ್ಲ. ಯಾಕಂದ್ರೆ ವಿದೇಶಿ ಆಟಗಾರರು ಐಪಿಎಲ್‍ನಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಹಾಗೇ ಭಾರತೀಯ ಆಟಗಾರರು ಕೂಡ ತಂಡ ಬೆನ್ನುಲುಬಾಗಿರುತ್ತಾರೆ. ಆದ್ರೆ ವಿದೇಶಿ ಆಟಗಾರರ ಉಪಸ್ಥಿತಿ ಟೂರ್ನಿಗೆ ಹೆಚ್ಚಿನ ಮೆರಗು ನೀಡುತ್ತದೆ. ಉದಾಹರಣೆ ನಮ್ಮ ತಂಡದಲ್ಲಿ ನೋಡಿ, ಸುನೀಲ್ ನರೈನ್, ಆಂಡ್ರೆ ರಸೇಲ್, ಇಯಾನ್ ಮೊರ್ಗಾನ್, ಪೀಟ್ ಕಮಿನ್ಸ್ ಮೊದಲಾದ ಸ್ಟಾರ್ ಆಟಗಾರರು ಇದ್ದಾರೆ. ಅವರ ಜೊತೆಗೆ ಭಾರತೀಯ ಆಟಗಾರರು ಆಡಿದಾಗ ತಂಡಕ್ಕೆ ಹೆಚ್ಚಿನ ಬಲ ಬರುತ್ತದೆ. ಆಟದಲ್ಲಿ ನಾವು ಗುಣಮಟ್ಟವನ್ನು ಕಾಣಲು ಸಾಧ್ಯ ಅಂತ ವೆಂಕಿ ಮೈಸೂರು ಹೇಳಿದ್ರು.








