ಬೆಂಗಳೂರು : ಮೆಡಿಕಲ್ ಸೀಟ್ ಕೊಡಿಸುವುದಾಗಿ ವಂಚಿಸಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.
ದಾವಣಗೆರೆಯಲ್ಲಿ ಮೆಡಿಕಲ್ ಸೀಟ್ (Medical Seat) ಕೊಡಿಸುವುದಾಗಿ ಮೈಸೂರು ವಿದ್ಯಾರ್ಥಿ ಮತ್ತು ಕುಟುಂಬಸ್ಥರನ್ನು ಬೆಂಗಳೂರಿಗೆ ಕರೆಯಿಸಿ 10 ಲಕ್ಷ ರೂ. ಪಡೆದು ನಂತರ ಸಂಪರ್ಕಕ್ಕೆ ಸಿಗದೆ ಐವರು ಪರಾರಿಯಾಗಿದ್ದರು. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಪೊಲೀಸರು ಬಂಧಿಸಿದ್ದಾರೆ.
ಮೆಡಿಕಲ್ ಓದಬೇಕು ಎಂಬ ಕನಸು ಇಟ್ಟುಕೊಂಡಿದ್ದ ಮೈಸೂರಿನ ವಿದ್ಯಾರ್ಥಿಯೊಬ್ಬ ಮೆಡಿಕಲ್ ಸೀಟ್ಗಾಗಿ ತಯಾರಿ ನಡೆಸುತ್ತಿದ್ದ. ಈ ವಿದ್ಯಾರ್ಥಿ ನೀಟ್ ಪರೀಕ್ಷೆಯಲ್ಲಿ ರ್ಯಾಂಕ್ ಬರದ ಹಿನ್ನೆಲೆಯಲ್ಲಿ ಮತ್ತೊಮ್ಮೆ ನೀಟ್ ಪರೀಕ್ಷೆಗೆ ತಯಾರಿ ನಡೆಸಿದ್ದ. ಈ ವೇಳೆ ಅಣ್ಣನ ಮೊಬೈಲ್ಗೆ ಅನಾಮಿಕ ಸಂದೇಶವೊಂದು ಬಂದಿದೆ. ಆನಂತ ಕೆಲವು ಹೊತ್ತಿನಲ್ಲಿ ಕರೆ ಮಾಡಿದ ಅಪರಿಚಿತರು ನಾಲ್ಕೈದು ವರ್ಷಗಳಿಂದ ಮೆಡಿಕಲ್ ಸೀಟ್ ಕೊಡಿಸುತ್ತಿದ್ದೇವೆ. ನಿಮ್ಮ ಮಗನಿಗೆ ದಾವಣಗೆರೆಯಲ್ಲಿ ಸೀಟ್ ಕೊಡಿಸುತ್ತೇವೆ ಎಂದು ಹೇಳಿ ಕರೆಯಿಸಿದ್ದಾರೆ.
ಕೂಡಲೇ ಅವರು ಸೂಚಿಸಿದಂತೆ ಪೋಷಕರು ಹಾಗೂ ವಿದ್ಯಾರ್ಥಿ ಬೆಂಗಳೂರಿನ ಕನ್ನಿಂಗ್ ಹ್ಯಾಮ್ ರಸ್ತೆಯ ಕಚೇರಿಯೊಂದಕ್ಕೆ ತೆರಳಿದ್ದಾರೆ. ಈ ಸಂದರ್ಭದಲ್ಲಿ ಖಾಸಗಿ ಕಾಲೇಜಿನ ಕಾರ್ಯದರ್ಶಿ ಎಂದು ಓರ್ವ ವ್ಯಕ್ತಿ ಪರಿಚಯ ಮಾಡಿಕೊಂಡಿದ್ದು, ಸರ್ಕಾರಿ ಕೋಟಾದಲ್ಲೇ ಸೀಟ್ ಸಿಗುತ್ತದೆ ಎಂದು ಹೇಳಿ ಮೂರು ಲಕ್ಷ ಪಡೆದಿದ್ದಾನೆ. ನಂತರ ಬಾಸ್ ಎಂದು ಮತ್ತೊಬ್ಬನನ್ನು ಪರಿಚಯ ಮಾಡಿಸಲಾಗಿದೆ. ಆಗ ಹತ್ತು ಲಕ್ಷ ನೀಡದರೆ ಸೀಟ್ ಸಿಗುವುದು ನಿಶ್ಚಿತವಾಗುತ್ತದೆ ಎಂದು ನಂಬಿಸಲಾಗಿದೆ. ನಂತರ ಸೀಟ್ ಕಾಯ್ದಿರಿಸುವ ಹೆಸರಿನಲ್ಲಿ 10.80 ಲಕ್ಷ ರೂ. ವಸೂಲಿ ಮಾಡಿದೆ. ನಂತರ ಫೋನ್ ಸ್ವೀಕರಿಸಿದೆ ಪರಾರಿಯಾಗಿದ್ದಾರೆ. ಆಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ಐವರನ್ನು ಬಂಧಿಸಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.