ಬೆಂಗಳೂರು: ಚಿನ್ನದಂಗಡಿ ಮಾಲೀಕರಿಗೆ ಮಹಿಳೆಯೊಬ್ಬರು ಕೋಟ್ಯಾಂತರ ರೂ. ವಂಚಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ವರ್ತೂರ್ ಪ್ರಕಾಶ್ (Varthur Prakash) ಇಂದು ಪೊಲೀಸ್ ವಿಚಾರಣೆಗೆ ಹಾಜರಾಗುತ್ತಿದ್ದಾರೆ.
ಕಮರ್ಷಿಯಲ್ ಸ್ಟ್ರೀಟ್ ಪೊಲೀಸರಿಂದ (Commercial Street Police) ವರ್ತೂರ್ ಪ್ರಕಾಶ್ ವಿಚಾರಣೆ ನಡೆಸಲಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ವೇತಾ ಎಂಬ ಮಹಿಳೆಯನ್ನು ಬಂಧಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸರು ವರ್ತೂರ್ ಪ್ರಕಾಶ್ ಗೆ ನೋಟಿಸ್ ನೀಡಲಾಗಿತ್ತು.
ಮಹಿಳೆಯು ವರ್ತೂರ್ ಪ್ರಕಾಶ್ ಹೆಸರು ಹೇಳಿ ಚಿನ್ನದ ವರ್ತಕರ ಬಳಿ ಚಿನ್ನ ಪಡೆದಿದ್ದಳು. ಸುಮಾರು ಎರಡೂವರೆ ಕೋಟಿ ರೂ. ಚಿನ್ನವನ್ನು ಮಹಿಳೆ ಖರೀದಿಸಿದ್ದಳು. ಚಿನ್ನ ಪಡೆಯುವಾಗ ವರ್ತೂರ್ ಪ್ರಕಾಶ್ ಹೆಸರು ಹೇಳಿರುವುದು ಬಯಲಿಗೆ ಬಂದಿದೆ. ಅಲ್ಲದೇ, ವರ್ತೂರ್ ಪ್ರಕಾಶ್ ಅವರ ಮನೆಯ ವಿಳಾಸವನ್ನೂ ನೀಡಿದ್ದಳು. ಚಿನ್ನದ ಹಣವನ್ನು ವರ್ತೂರ್ ಪ್ರಕಾಶ್ ಕೊಡುವುದಾಗಿ ಮಹಿಳೆ ಚಿನ್ನ ಪಡೆದಿದ್ದಳು. ಅಡ್ರಸ್ ತೆಗೆದುಕೊಂಡು ಅಂಗಡಿ ಮಾಲೀಕರು ಮನೆಗೆ ಹೋದಾಗ ವಂಚನೆ ಬೆಳಕಿಗೆ ಬಂದಿದೆ. ಹೀಗಾಗಿ ಇಂದು ವರ್ತೂರ್ ವಿಚಾರಣೆ ನಡೆಯುತ್ತಿದೆ.








