ಬಾಯರ್ ಕ್ರಾಪ್’ಸೈನ್ಸ್ ಲಿಮಿಟೆಡ್ ನಿಂದ ಉಚಿತ ಕೃಷಿ ಬಿತ್ತನೆ ಬೀಜ ವಿತರಣೆ

ಬೆಂಗಳೂರು, ಜೂನ್ 18: ದೇಶದ ಪ್ರತಿಷ್ಠಿತ ಸಂಸ್ಥೆಯಾದ ಬಾಯರ್ ಕ್ರಾಪ್’ಸೈನ್ಸ್ ಲಿಮಿಟೆಡ್ ರಾಜ್ಯದ ಸುಮಾರು ಇವತ್ತು ಸಾವಿರ ಸಣ್ಣ ರೈತರಿಗೆ ಉಚಿತ ಕೃಷಿ ಬಿತ್ತನೆ ಬೀಜ ವಿತರಣೆ ಮಾಡಲು ನಿರ್ಧರಿಸಿದೆ. ಬುಧವಾರ ಕೃಷ್ಣಾದಲ್ಲಿ ನಡೆದ ಸರಳ ಸಮಾರಂಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಉಚಿತ ಕೃಷಿ ಬಿತ್ತನೆ ಬೀಜ ವಿತರಣೆಗೆ ಚಾಲನೆ ನೀಡಿ ಮಾತನಾಡಿದರು. ದೇಶದ ಬೆನ್ನೆಲುಬಾದ ರೈತರು ಪ್ರಸ್ತುತ ಕೊರೋನಾ ಸಾಂಕ್ರಾಮಿಕ ಪರಿಸ್ಥಿತಿಯಿಂದ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಸಣ್ಣಹಿಡುವಳಿದಾರ ರೈತರಿಗೆ ಉಚಿತ ಬೀಜಗಳನ್ನು ಒದಗಿಸಲು ಮತ್ತು ಸೂಕ್ತ ಕೃಷಿ ತರಬೇತಿಯನ್ನು ನೀಡಲು ಬಾಯರ್ ಕಂಪನಿ ನಿರ್ಧರಿಸಿದ್ದು ನಮ್ಮ ಸರ್ಕಾರದೊಂದಿಗೆ ಕೈಜೋಡಿಸಿದ್ದಾರೆ. ಇದು ರೈತರ ಜೀವನ ಮತ್ತು ಜೀವನೋಪಾಯವನ್ನು ಸುಧಾರಿಸಲು ನೆರವಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು. ಸಭೆಯಲ್ಲಿ ಬಾಯರ್ ಸಂಸ್ಥೆಯ ವ್ಯವಸ್ಥಾಪಕ (ಸಿ ಎಸ್ ಆರ್) ಮ್ಯಾಥ್ಯೂ ಮತ್ತು ಕಾರ್ಪೊರೇಟ್ ಸೋಶಿಯಲ್ ರೆಸ್ಪಾನ್ಸಿಬಲ್ ಮುಖ್ಯಸ್ಥ ಸುಹಾಸ್ ಆರ್ ಜೋಷಿ, ಸಿಎಂ ರಾಜಕೀಯ ಕಾರ್ಯದರ್ಶಿ ಶಂಕರ್ ಗೌಡ್ ಪಾಟೀಲ್, ಕೃಷಿ ಸಚಿವ ಬಿ.ಸಿ.ಪಾಟೀಲ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ಶಂಕರ್ ಗೌಡ ಪಾಟೀಲ್ ಅವರು ಮಾತನಾಡಿ ಸಣ್ಣ ಹಿಡುವಳಿ ರೈತರಿಗೆ ನೆರವಿನ ಅಗತ್ಯವಿದ್ದು ಮುಂಗಾರು ಆಗಮನ ರೈತರಿಗೆ ಖುಷಿ ನೀಡಿದ್ದು ಅವರಿಗೆ ಬಿತ್ತನೆ ಬೀಜದ ಅಗತ್ಯವನ್ನು ಮನಗಂಡು ಬಾಯರ್ ಸಂಸ್ಥೆಯ ಸಹಭಾಗಿತ್ವದಲ್ಲಿ ಕೃಷಿ ಇಲಾಖಾ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಫಲಾನುಭವಿಗಳನ್ನು ಗುರುತಿಸಿ ನೀಡಲಾಗುವುದು ಎಂದು ತಿಳಿಸಿದರು.

ಬಾಯರ್ ಸಂಸ್ಥೆಯ ವ್ಯವಸ್ಥಾಪಕ (ಸಿ ಎಸ್ ಆರ್) ಮ್ಯಾಥ್ಯೂ ಮಾತನಾಡಿ ಪ್ರಸ್ತುತ ರಾಜ್ಯದ ರೈತರು ಕೊರೊನಾ ಮಹಾಮಾರಿ ರೋಗಕ್ಕೆ ತತ್ತರಿಸಿದ್ದಾರೆ. ಇದೀಗ ಸಂಸ್ಥೆ ಸರಕಾರದ ಸಹಭಾಗಿತ್ವದಲ್ಲಿ ರೈತರ ನೆರವಿಗೆ ಸಹಾಯಹಸ್ತ ನೀಡಲಿದ್ದು, ರಾಜ್ಯದ ಸುಮಾರು ಇವತ್ತು ಸಾವಿರ ಅತಿ ಸಣ್ಣ ರೈತರನ್ನು ಗುರುತಿಸಿ ಅವರಿಗೆ ಜೋಳ , ಮೆಕ್ಕೆ ಜೋಳ , ಮತ್ತು ತರಕಾರಿಗಳನ್ನು ಬಿತ್ತನೆಯನ್ನು ಪ್ರದೇಶಕ್ಕೆ ಅನುಗುಣವಾಗಿ ನೀಡಲಿದ್ದೇವೆ ಎಂದು ಹೇಳಿದರು. ಇದರ ಜೊತೆ ರೈತರಿಗೆ ಸೂಕ್ತ ಕೃಷಿ ತರಬೇತಿಯನ್ನು ನೀಡುವುದಾಗಿ ತಿಳಿಸಿದರು.
ಬಾಯರ್ ಸಂಸ್ಥೆಯು ಈ ಯೋಜನೆಯನ್ನು ಮುಂದಿನ ದಿನಗಳಲ್ಲಿ ದೇಶದಾದ್ಯಂತ ವಿಸ್ತರಿಸುವ ಸಂಕಲ್ಪ ಹೊಂದಿದ್ದು, ಸದ್ಯ ರಾಜ್ಯದ 18 ಜಿಲ್ಲೆಗಳನ್ನು ಆಯ್ಕೆ ಮಾಡಲಾಗಿದೆ. ಈಗಾಗಲೇ ಬಾಯರ್ ಸಂಸ್ಥೆ ಸುಮಾರು 1 .73 ಕೋಟಿಯಷ್ಟು ಪ್ರಧಾನ ಮಂತ್ರಿ ಪರಿಹಾರನಿಧಿಗೆ ನೀಡಿದ್ದು ಸುಮಾರು 22 ಲಕ್ಷದಷ್ಟು ಮುಖ್ಯಮಂತ್ರಿ ಪರಿಹಾರನಿಧಿಗೆ ದೇಣಿಗೆ ನೀಡಿದಲ್ಲದೆ ಕೊರೊನಾ ಯೋಧರಿಗೆ ಇತರ ಹತ್ತು ಹಲವು ರೀತಿಯಲ್ಲಿ ಸಹಾಯ ನೀಡಿದ್ದು ಇದೀಗ ರೈತ ಮುಖಿ ಕಾರ್ಯಕ್ರಮ ನಿಜಕ್ಕೂ ಶ್ಲಾಘನೀಯ.








