ನವದೆಹಲಿ: ಕೊರೊನಾ ತಡೆಗಟ್ಟಲು ಹೇರಲಾಗಿರುವ ಲಾಕ್ ಡೌನ್ ನಿಂದ ಆರ್ಥಿಕ ಚಟುವಟಿಕೆಗಳು ಸ್ತಬ್ಧವಾಗಿವೆ. ಇದರಿಂದ ಬಡಜನರು ಊಟಕ್ಕಾಗಿ ಪರದಾಡುತ್ತಿದ್ದಾರೆ.ಇದೀಗ ಇಂಥವರ ನೆರವಿಗೆ ರಿಲಯನ್ಸ್ ಫೌಂಡೇಶನ್ ಧಾವಿಸಿದೆ.
ಭಾರತದ ನಂ. 1 ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಪತ್ನಿ ಹಾಗೂ ರಿಲಯನ್ಸ್ ಫೌಂಡೇಶನ್ ಚೇರ್ ಪರ್ಸನ್ ನೀತಾ ಅಂಬಾನಿಯ ಅವರು ತಮ್ಮ ಫೌಂಡೇಶನ್ ವತಿಯಿಂದ ಭಾರತದ ಜನರಿಗೆ ‘ಮಿಷನ್ ಅನ್ನ ಸೇವಾ’ ಹೆಸರಿನಲ್ಲಿ ವಿಶ್ವದ ಬಹುದೊಡ್ಡ ಕಾರ್ಪೊರೇಟ್ ಊಟ ವಿತರಣೆ ಕಾರ್ಯಕ್ರಮವನ್ನು ಘೋಷಣೆ ಮಾಡಿದ್ದಾರೆ.
ಈ ಕಾರ್ಯಕ್ರಮದ ಮೂಲಕ ದೇಶಾದ್ಯಂತ 3 ಕೋಟಿ ಜನರಿಗೆ ಉಚಿತ ಊಟ ವಿತರಣೆ ಮಾಡಲಿದ್ದಾರೆ. ಲಾಕ್ ಡೌನ್ ನಿಂದ ತೊಂದರೆಗೆ ಸಿಲುಕಿರುವ ಸಮುದಾಯಗಳು ಮತ್ತು ಕೂಲಿ ಕಾರ್ಮಿಕರಿಗೆ ಈ ಕಾರ್ಯಕ್ರಮ ನೆರವಾಗಲಿದೆ.
ಈ ಬಗ್ಗೆ ಮಾತನಾಡಿರುವ ನೀತಾ ಅವರು, ಕೊರೊನಾ ವೈರಸ್ ಇಡೀ ವಿಶ್ವ, ಭಾರತ ಮತ್ತು ಮಾನವೀಯತೆಗೆ ಹಿಂದೆದು ಕಂಡಿರದ ಒಂದು ಸಾಂಕ್ರಮಿಕವಾಗಿದೆ. ಇಂತಹ ಕಷ್ಟದ ಸಮಯದಲ್ಲಿ ನಮ್ಮ ಫೌಂಡೇಶನ್ ವತಿಯಿಂದ ದಿನಗೂಲಿ ನೌಕರರು, ಕೊಳಗೇರಿ ನಿವಾಸಿಗಳು, ನಗರ ಸೇವಾ ಪೂರೈಕೆದಾರರು, ಕಾರ್ಮಿಕರು ಹಾಗೂ ವೃದ್ಧಾಶ್ರಮ ಮತ್ತು ಅನಾಥಾಶ್ರಮಗಳಿಗೆ ಬಹುದೊಡ್ಡ ಊಟದ ಕಾರ್ಯಕ್ರಮದಡಿಯಲ್ಲಿ ಉಚಿತ ಊಟ ವಿತರಣೆ ಮಾಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.








